ಮಾರ್ಕೆಟ್ ಗಳಲ್ಲಿ ಪ್ಯಾಕ್ ಆಗಿ ಸಿಗುವ ಜೇನುತುಪ್ಪಗಳಲ್ಲಿ ಹೆಚ್ಚಿನವು ಕಲಬೆರೆಕೆಯಿಂದ ಕೂಡಿರುತ್ತವೆ. ಕೆಲವರು ತೂಕ ಹೆಚ್ಚಿಸಲು ಜೇನುತುಪ್ಪಕ್ಕೆ ಸಕ್ಕರೆ ನೀರನ್ನು ಬೆರೆಸುತ್ತಾರೆ, ಇನ್ನೂ ಕೆಲವರು ಕೃತಕ ಫ್ಲೇವರ್ ಸೇರಿಸಿರುತ್ತಾರೆ. ಹೀಗಾಗಿ ಹೆಚ್ಚು ಹಣ ನೀಡಿ ಕೊಂಡುಕೊಂಡಿರುವ ಜೇನುತುಪ್ಪ ಶುದ್ಧವಾಗಿದೇಯೋ ಇಲ್ಲವೊ ಎಂದು ಪರೀಕ್ಷಿಸಲು ಈ ವಿಧಾನ ಬೆಸ್ಟ್.
ಸ್ವಲ್ಪ ಜೇನುತುಪ್ಪವನ್ನು ಹೆಬ್ಬೆರಳ ಮೇಲೆ ಹಾಕಿ, ಜೇನುತುಪ್ಪ ಶುದ್ಧವಾಗಿದ್ದರೆ ನಿಂತಲ್ಲೇ ನಿಲ್ಲುತ್ತದೆ, ಕಲಬೆರಕೆಯಿಂದ ಕೂಡಿದ್ದರೆ, ಬೆರಳಿನಿಂದ ಜಾರಿ ಹರಡಿಕೊಳ್ಳುತ್ತದೆ.
ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿ. ಜೇನುತುಪ್ಪ ಸೀದಾ ಗ್ಲಾಸ್ ನ ಕೆಳಗಡೆ ಸೇರಿಕೊಂಡರೆ, ಶುದ್ಧವಾಗಿದೆ ಎಂದರ್ಥ, ಒಮ್ಮೆ ನೀರಿನ ಜೊತೆ ಹರಡಿ ಕರಗಿ ಹೋದರೆ ಕಲಬೆರಕೆಯಾಗಿದೆ ಎಂದರ್ಥ.
ಬೆಂಕಿ ಕಡ್ಡಿಯ ತುದಿಯನ್ನು ಜೇನುತುಪ್ಪದಲ್ಲಿ ಮುಳುಗಿಸಿ, ನಂತರ ಬೆಂಕಿ ಹತ್ತಿಸಲು ಪ್ರಯತ್ನಿಸಿ. ಜೇನುತುಪ್ಪ ಶುದ್ಧವಾಗಿದ್ದರೆ ತಕ್ಷಣ ಕಡ್ಡಿಗೆ ಬೆಂಕಿ ತಾಗುತ್ತದೆ. ಕಲಬೆರಕೆಯಾಗಿದ್ದರೆ, ಬೆಂಕಿ ಹೊತ್ತಿಕೊಳ್ಳುವುದಿಲ್ಲ.
ಟಿಶ್ಯು ಅಥವಾ ಪೇಪರ್ ಟವೆಲ್ ಮೇಲೆ ಜೇನುತುಪ್ಪವನ್ನು ಹಾಕಿ, ಒಮ್ಮೆ ಪೇಪರ್ ಜೇನುತುಪ್ಪವನ್ನು ಹೀರಿಕೊಂಡರೆ, ಅಥವಾ ಪೇಪರ್ ಒದ್ದೆಯಾದರೆ, ಜೇನುತುಪ್ಪ ಕಲಬೆರಕೆಯಿಂದ ಕೂಡಿದೆ ಎಂದರ್ಥ. ಜೇನುತುಪ್ಪ ಹೀರಿ ಹೋಗದೇ ಹಾಗೇ ಇದ್ದರೆ, ಶುದ್ಧವಾಗಿದೆ ಎಂದರ್ಥ.
ಜೇನುತುಪ್ಪಕ್ಕೆ ಸ್ವಲ್ಪ ನೀರು ಮತ್ತು 2-3 ಹನಿ ವಿನೇಗರ್ ಹಾಕಿ ಕಲಸಿ. ಜೇನುತುಪ್ಪ ನೊರೆಯಾದರೆ, ಕಲಬೆರಕೆಯಾಗಿದೆ ಎಂದರ್ಥ.