ನೀಲಾವರದ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಸೀತಾನದಿಯ ದಡದಲ್ಲಿದೆ. ಈ ದೇವಸ್ಥಾನವನ್ನು ಗಲವ ಮಹರ್ಷಿಯವರು ನಿರ್ಮಿಸಿದ್ದಾರೆ. ನೀಲಾವರದ ಇತಿಹಾಸವನ್ನು ನೀಲಾವರ ಕ್ಷೇತ್ರ ಪುರಾಣದ ಮೂಲಕ ತಿಳಿಯಬಹುದಾಗಿದೆ. ಮಂಗಳವಾರ ಮತ್ತು ಶುಕ್ರವಾರ ದೇವಿಗೆ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಚೈತ್ರ ಪೌರ್ಣಿಮೆಯ ನಾಲ್ಕು ದಿನಗಳ ನಂತರದಲ್ಲಿ ನಡೆಯುತ್ತದೆ. ನವರಾತ್ರಿ ಹಬ್ಬವನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪಂಚಮಿ ಕಾನನವು ಸೀತಾನದಿಯ ಪೂರ್ವದಲ್ಲಿದೆ. ಇದು ನಾಗದೇವರ ದೇವಸ್ಥಾನ. ವೃಶ್ಚಿಕ ಮಾಸದಲ್ಲಿ ಇಲ್ಲಿ ತೀರ್ಥಸ್ನಾನವನ್ನು ಮಾಡಲಾಗುತ್ತದೆ. ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಬರುವವರು ಪಂಚಮಿ ಕಾನನಕ್ಕೂ ಬಂದು ದೇವರ ದರ್ಶನ ಮಾಡಬೇಕೆಂಬ ವಾಡಿಕೆ ಇದೆ.
ಬ್ರಹ್ಮಾವರದಿಂದ 7 ಕಿಲೋಮೀಟರ್ ದೂರದಲ್ಲಿ ನೀಲಾವರವಿದೆ ಮತ್ತು ಕುಂಜಾಲುವಿನಿಂದ 3 ಕಿಲೋಮೀಟರ್ ದೂರದಲ್ಲಿದೆ. ಹೆಬ್ರಿಯಿಂದ ಬ್ರಹ್ಮಾವರಕ್ಕೆ ಬರುವ ರಸ್ತೆಯಲ್ಲಿ ನೀಲಾವರ ಸಿಗುತ್ತದೆ.