ನೀರಿಲ್ಲದೇ ಬದುಕುವುದು ಅಸಾಧ್ಯ. ಯಾಕಂದ್ರೆ ನಮ್ಮ ದೇಹದ ಶೇ.75ರಷ್ಟು ಭಾಗ ನೀರನ್ನೇ ಒಳಗೊಂಡಿದೆ. ನಾವು ಹೆಚ್ಹೆಚ್ಚು ನೀರು ಕುಡಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹವು ಅನೇಕ ರೋಗಗಳಿಂದ ದೂರವಿರುತ್ತದೆ.
ನೀರು ಕುಡಿಯುವುದರಿಂದ ದಿನವಿಡೀ ತಾಜಾತನದ ಅನುಭವವಾಗುತ್ತದೆ. ಪ್ರತಿ ವ್ಯಕ್ತಿಯೂ ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ದೇಹದಲ್ಲಿ ನೀರಿನ ಕೊರತೆಯಾದರೆ ಆಮ್ಲಜನಕವು ಜೀವಕೋಶಗಳಿಗೆ ಸರಿಯಾಗಿ ತಲುಪುವುದಿಲ್ಲ. ಆದರೆ ನೀರು ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡಿದರೆ ಗಂಭೀರ ಕಾಯಿಲೆಗಳು ಬರಬಹುದು. ವರದಿಯೊಂದರಲ್ಲಿ ಇದು ಬೆಳಕಿಗೆ ಬಂದಿದೆ. ಸರಿಯಾದ ಕ್ರಮದಲ್ಲಿ ನೀರನ್ನು ಕುಡಿಯದೇ ಇದ್ದರೆ ಗಂಟಲು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯಬೇಡಿ – ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಜನರು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈಕ್ರೋಪ್ಲಾಸ್ಟಿಕ್ ಇರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವು ನೀರಿನಲ್ಲಿ ಸೇರಿಕೊಳ್ಳುತ್ತದೆ ಮತ್ತು ಇದು ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವನ್ನು ಹರಡುತ್ತದೆ. ಇದರಿಂದ ಗಂಟಲಿನ ಅಂಗಾಂಗಗಳಿಗೆ ಅಂದರೆ ನೀರು ಮತ್ತಿತರ ದ್ರವಗಳನ್ನು ಕುಡಿಯುವ ಹಾದಿಗೆ ಹಾನಿಯಾಗಿ ಕ್ಯಾನ್ಸರ್ ಬರುವ ಅಪಾಯವಿರುತ್ತದೆ.
ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯಬೇಕು –
ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಿದರೆ ನಿರ್ಜಲೀಕರಣದ ಸಮಸ್ಯೆಯನ್ನು ತಪ್ಪಿಸಬಹುದು. ತೀವ್ರವಾದ ಶಾಖ ಮತ್ತು ಸೆಖೆ ಇದ್ದಾಗ ನೀರನ್ನು ಹೆಚ್ಹೆಚ್ಚು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆಯಿಂದಾಗಿ ತಲೆತಿರುಗುವಿಕೆ ಉಂಟಾಗಬಹುದು. ಇದನ್ನೆಲ್ಲ ತಪ್ಪಿಸಲು ವಯಸ್ಕರು ದಿನಕ್ಕೆ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಬೇಕು.
ನೀರು ಕುಡಿಯುವ ವಿಧಾನ – ಹೆಚ್ಚಿನ ಜನರು ನೀರು ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಫ್ರಿಡ್ಜ್‌ನಿಂದ ಬಾಟಲಿ ತೆಗೆದು ತಕ್ಷಣ ನೀರು ಕುಡಿಯುತ್ತಾರೆ. ಕೆಲವರು ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುತ್ತಾರೆ. ಈ ರೀತಿ ಮಾಡಬಾರದು. ಆಹಾರ ಸೇವಿಸುವಾಗ ಅಥವಾ ತಿಂದ ತಕ್ಷಣ ನೀರು ಕುಡಿಯಬಾರದು. ಹೆಚ್ಚಿನ ಖನಿಜಗಳೊಂದಿಗೆ ನೀರು ಕುಡಿಯುವುದನ್ನು ತಪ್ಪಿಸುವುದು ಉತ್ತಮ. ನಿಂತುಕೊಂಡು ನೀರು ಕುಡಿಯಬೇಡಿ. ಯಾವಾಗಲೂ ನೀರನ್ನು ಕುಳಿತೇ ಕುಡಿಯಿರಿ. ಸರಿಯಾಗಿ ನೀರು ಕುಡಿಯುವುದರಿಂದ ಆರೋಗ್ಯವಾಗಿರಬಹುದು.