ರೈಲಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ನೀರಿನ ಬಾಟಲಿಗೆ ಐದು ರೂಪಾಯಿ ಹೆಚ್ಚು ಪಡೆದ ಕಾರಣಕ್ಕೆ ಐ ಆರ್ ಸಿ ಟಿ ಸಿ, ಗುತ್ತಿಗೆದಾರನಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ ಗುತ್ತಿಗೆಯನ್ನು ರದ್ದುಗೊಳಿಸುವಂತೆಯೂ ಸಹ ಶಿಫಾರಸ್ಸು ಮಾಡಲಾಗಿದೆ.
ಇಂತಹದೊಂದು ಘಟನೆ ಉತ್ತರ ಪ್ರದೇಶದ ಅಂಬಾಲಾ ವಿಭಾಗದಲ್ಲಿ ನಡೆದಿದ್ದು, ಲಕ್ನೋ – ಚಂಡಿಗಡ – ಲಕ್ನೋ ರೈಲು ಸಂಖ್ಯೆ 12232 ರೈಲಿನಲ್ಲಿ ಶಿವಮ್ ಭಟ್ ಎಂಬವರು ಪ್ರಯಾಣ ಮಾಡುತ್ತಿದ್ದ ವೇಳೆ ಒಂದು ಲೀಟರ್ ನೀರಿನ ಬಾಟಲಿಯನ್ನು ದಿನೇಶ್ ಎಂಬಾತನಿಂದ ಖರೀದಿಸಿದ್ದರು.
ಅದರ ಮುಖಬೆಲೆ 15 ರೂಪಾಯಿ ಎಂದು ಮುದ್ರಿಸಲಾಗಿದ್ದರೂ ಸಹ ಶಿವಂ ಅವರಿಂದ 20 ರೂಪಾಯಿಯನ್ನು ಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ ಇದನ್ನು ವಿಡಿಯೋ ಮಾಡಿ ಶಿವಂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
ಈ ವಿಚಾರ ಐಆರ್ಸಿಟಿಸಿ ಗಮನಕ್ಕೆ ಬರುತ್ತಿದ್ದಂತೆ, ರೈಲಿನಲ್ಲಿ ಆಹಾರ ಪದಾರ್ಥ ಮಾರಾಟ ಮಾಡಲು ಗುತ್ತಿಗೆ ಪಡೆದುಕೊಂಡಿದ್ದ M/S ಚಂದ್ರ ಮೌಳಿ ಮಿಶ್ರಾ ಎಂಬ ಗುತ್ತಿಗೆದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ ಗುತ್ತಿಗೆಯನ್ನು ಸಹ ರದ್ದುಪಡಿಸಲು ಶಿಫಾರಸ್ಸು ಮಾಡಲಾಗಿದೆ.