ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ ಕೆಲವೊಂದು ಕಡೆ ಕುಡಿಯುವ ನೀರಿಗೂ ತತ್ವಾರವಾಗಿದೆ. ಅದರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಕೂಡ ಒಂದು. ಇಲ್ಲಿನ ನೀರಿನ ಬವಣೆಗೆ ಪಾಲಿಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಮದುವೆ ದಿನದಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾನೆ.
ವಿಶಾಲ್ ಎಂಬಾತ ಹೆಣ್ಣು ಕೊಟ್ಟ ಮಾವನಿಂದ ನೀರಿನ ಟ್ಯಾಂಕರ್ ಅನ್ನು ಉಡುಗೊರೆಯಾಗಿ ಪಡೆದಿದ್ದು, ತನ್ನ ಮದುವೆಯ ದಿನದಂದು ನವವಧು ಜೊತೆ ಅದರಲ್ಲಿ ಮೆರವಣಿಗೆ ಹೋಗಿದ್ದಾನೆ. ಅಷ್ಟೇ ಅಲ್ಲ ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ.
ವಿಶಾಲ್ ಪತ್ನಿ ಅರ್ಪಣಾ ಕೂಡ ತನ್ನ ಪತಿಯ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ನಾಗರೀಕರ ನೀರಿನ ಸಮಸ್ಯೆಗೆ ಸ್ಪಂದಿಸದ ಕೊಲ್ಲಾಪುರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಮದುವೆ ಮೆರವಣಿಗೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.