ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ಈ ದುರಂತದಲ್ಲಿ 30 ವರ್ಷದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ವೆಲ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ತಮ್ಮ ಪ್ರದೇಶದಿಂದ ಹತ್ತಿ ಹೊಲಕ್ಕೆ, ಹೋಗಲು ಆರು ಜನರ ಮಹಿಳೆಯರ ಗುಂಪೊಂದು ದೋಣಿ ಹತ್ತಿದ್ದಾರೆ. ಇವರ ಪ್ರಯಾಣದ ವೇಳೆ ದೋಣಿ ಮಗುಚಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೀತಾ ರಾಮದಾಸ್ ನಿಂಬಾರ್ಟೆ ಮುಳುಗಿ ಸಾವನ್ನಪ್ಪಿರುವ ದುರಾದೃಷ್ಟ ಮಹಿಳೆ. ಇನ್ನುಳಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೋಣಿ ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ, ವೆಲ್ತೂರ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತ ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಇತರ ಮಹಿಳೆಯರನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಬದುಕುಳಿರುವ ಐವರಲ್ಲಿ ಇಬ್ಬರ ಪರಿಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ನಾಗ್ಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದಂತೆ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.