ನಾವು ಕುಡಿಯುವ ನೀರು ಅತ್ಯಂತ ಶುದ್ಧವಾಗಿರಬೇಕು. ಅದರಲ್ಲಿ ಕೊಂಚ ಏರುಪೇರಾದ್ರೂ ಆರೋಗ್ಯ ಹದಗೆಡುವುದು ಗ್ಯಾರಂಟಿ. ಹಾಗಾಗಿ ನೀವು ಪ್ಯಾಕೇಜ್ಡ್ ವಾಟರ್ ಕುಡಿಯುತ್ತಿದ್ದರೂ ಆ ನೀರು ಸೇವನೆಗೆ ಯೋಗ್ಯವೇ ಅನ್ನೋದನ್ನು ಪರೀಕ್ಷಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನೀರಿಗೆ ಎಕ್ಸ್‌ಪೈರಿ ಡೇಟ್ ಇದೆಯೇ ಅನ್ನೋದು ಬಹುತೇಕರನ್ನು ಕಾಡುವ ಗೊಂದಲ. ಬಾಟಲಿಗಳಲ್ಲಿ ತುಂಬಿಟ್ಟಿರುವ ನೀರನ್ನು ಎಷ್ಟು ದಿನಗಳ ಕಾಲ ಬಳಸಬಹುದು? ಅವುಗಳ ಎಕ್ಸ್‌ಪೈರಿ ದಿನಾಂಕ ಯಾವಾಗ ಎಂಬುದನ್ನೆಲ್ಲ ನೋಡೋಣ.
ಪ್ರಸ್ತುತ ನೀರಿನ ಬಾಟಲಿಗಳ ಮಾರಾಟ ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ನಗರದಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಮಿನರಲ್ ವಾಟರ್ ಹೆಸರಲ್ಲಿ ಈ ಬ್ಯುಸಿನೆಸ್ ಜೋರಾಗಿದೆ. ನೀರಿನ ಬಾಟಲಿಯ ಮೇಲೆ ಎಕ್ಸ್‌ಪೈರಿ ಡೇಟ್ ಬರೆದಿರುತ್ತಾರೆ. ನೀರು ಕೆಟ್ಟು ಹೋಗುವ ಸಾಧ್ಯತೆ ಇಲ್ಲ ಎಂದಾದ ಮೇಲೆ ಬಾಟಲಿಗಳ ಮೇಲ್ಯಾಕೆ ದಿನಾಂಕ ಬರೆಯುತ್ತಾರೆ ಎಂಬ ಪ್ರಶ್ನೆ ಸಹಜ. ವಾಸ್ತವವಾಗಿ ನೀರಿನ ಬಾಟಲಿಗಳ ಮೇಲೆ ಬರೆಯಲಾದ ಅವಧಿಯು ನೀರಿನ ಎಕ್ಸ್‌ಪೈರಿ ಡೇಟ್ ಅಲ್ಲ, ಬದಲಾಗಿ ಬಳಸಿದ ಬಾಟಲಿಯ ಎಕ್ಸ್‌ಪೈರಿ ದಿನಾಂಕವಾಗಿರುತ್ತದೆ.
ನೀರಿನ ಬಾಟಲಿಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ನಿರ್ದಿಷ್ಟ ಸಮಯದ ನಂತರ ಪ್ಲಾಸ್ಟಿಕ್ ನೀರಿನಲ್ಲಿ ನಿಧಾನವಾಗಿ ಕರಗಲು ಪ್ರಾರಂಭಿಸುತ್ತದೆ. ಹಾಗಾದಾಗ ಆ ನೀರನ್ನು ಕುಡಿಯುವುದು ಬಹಳ ಅಪಾಯಕಾರಿ. ಈ ಕಾರಣಕ್ಕಾಗಿಯೇ ಬಾಟಲಿಗಳಿಗೆ ಎಕ್ಸ್‌ಪೈರಿ ಡೇಟ್ ಹಾಕಲಾಗುತ್ತದೆ. ನೀರಿಗೆ ಎಕ್ಸ್‌ಪೈರಿ ಡೇಟ್ ಇಲ್ಲ. ಆದರೆ ಶುದ್ಧೀಕರಿಸಿದ ನೀರನ್ನು ಮಾತ್ರ ಕುಡಿಯಬೇಕು. ನೀರನ್ನು ಶುದ್ಧೀಕರಿಸುವ ಹಲವಾರು ಪ್ರಕ್ರಿಯೆಗಳಿವೆ. ಆದಾಗ್ಯೂ ನೀರನ್ನು ಒಂದೇ ಸ್ಥಳದಲ್ಲಿ ದೀರ್ಘಕಾಲ ಇರಿಸಿದರೆ ಅದು ವಾಸನೆ ಬರಲಾರಂಭಿಸುತ್ತದೆ. ಕುಡಿಯುವ ಮೊದಲು ಅದನ್ನು ಶುದ್ಧೀಕರಿಸುವುದು ಅವಶ್ಯಕ.