ಬೆಂಗಳೂರು: ಮೇಕೆದಾಟು ಹೋರಾಟ ಬೆಂಬಲಿಸುವಂತೆ ಪಕ್ಷಾತೀತವಾಗಿ ನಾಯಕರು ಹಾಗೂ ಸಂಘಟನೆಗಳಿಗೆ ಕೋರಲಾಗಿದ್ದು, ಎಲ್ಲರೂ ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಹೋರಾಟಕ್ಕೆ ಸರ್ಕಾರವು ಅನುಮತಿ ನೀಡದಿದ್ದರೆ, ಸಿದ್ದರಾಮಯ್ಯ ಹಾಗೂ ನಾನು ಇಬ್ಬರೇ ನಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ವ್ಯಾಪ್ತಿಯಲ್ಲಿಯೇ ನಮ್ಮ ಹೋರಾಟ ನಡೆಸಲು ಮುಂದಾಗಿದ್ದೇವೆ. ನೀರಿಗಾಗಿ ನಡಿಗೆ ಇರುತ್ತದೆ. ನಮ್ಮ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ನೀಡದಿದ್ದರೆ ನಾವಿಬ್ಬರೇ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಜ. 9ರಿಂದ 19 ರವರೆಗೆ ನಮ್ಮ ನೀರಿಗಾಗಿ ನಡಿಗೆ ನಡೆಯಲಿದೆ. ಇದಕ್ಕೆ ಈಗಾಗಲೇ ಸಿದ್ಧತೆಗಳು ನಡೆದಿವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ನಮ್ಮ ಹೋರಾಟ ನಡೆಯಬಾರದೆಂಬ ಕಾರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಜ. 19ರಂದು ಬೆಳಿಗ್ಗೆಯವರೆಗೂ ಕರ್ಫ್ಯೂ ವಿಧಿಸಲಾಗಿದೆ. ನಾವು ಮಾಡುತ್ತಿರುವುದು ರಾಜ್ಯದ ಹಿತಕ್ಕಾಗಿಯೇ ಹೊರತು, ನಮ್ಮ ಸ್ವಾರ್ಥಕ್ಕಲ್ಲ ಎಂದಿದ್ದಾರೆ ಡಿ.ಕೆ. ಶಿವಕುಮಾರ್.
ಕೋವಿಡ್ ನಿಯಮದಂತೆಯೇ ನಮ್ಮ ಕಾರ್ಯಕ್ರಮ ನಡೆಯಲಿದೆ. ಜ. 19ರಂದು ಬಹಿರಂಗ ಸಭೆಯ ಮೂಲಕ ಕಾರ್ಯಕ್ರಮ ನಡೆಯಲಿದೆ. ನಾವು ಈಗಾಗಲೇ ಘೋಷಿಸಿದಂತೆ ನೀರಿಗಾಗಿ ನಡಿಗೆ ಮಾತಿಗೆ ನಾವು ಬದ್ಧ ಎಂದು ಹೇಳಿದ್ದಾರೆ.
ಮದುವೆ ಸಮಾರಂಭಗಳಲ್ಲಿ 50ಕ್ಕೂ ಹೆಚ್ಚು ಜನರು ಸೇರಬಾರದು ಎಂದು ಇವರೇ ನಿಯಮ ರೂಪಿಸಿದ್ದಾರೆ. ಆದರೆ, ಸಿಎಂ ಸೇರಿದಂತೆ ಹಲವು ಸಚಿವರು ಹೆಚ್ಚು ಜನ ಇರುವ ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲ ತಮ್ಮ ಪಕ್ಷದಿಂದ ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ. ಈ ತಪ್ಪಿಗೆ ಯಾವುದೇ ಕ್ರಮ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.