ನೀರಾವರಿ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಬಂದ ಕಳ್ಳರು 60 ಅಡಿ ಉದ್ದದ ಹಾಗೂ 500 ಟನ್ ತೂಕದ ಹಳೆಯ ಕಬ್ಬಿಣದ ಸೇತುವೆಯನ್ನೇ ಕದ್ದ ಘಟನೆಯು ಬಿಹಾರದ ರೋಹ್ಟಾಸ್ ಜಿಲ್ಲೆಯ ನಸ್ರಿಗಂಜ್ನ ಅಮಿಯಾವರ್ ಎಂಬಲ್ಲಿ ಸಂಭವಿಸಿದೆ.
ನೀರಾವರಿ ಅಧಿಕಾರಿಗಳು ಎಂದು ಎಲ್ಲರನ್ನೂ ನಂಬಿಸಿದ ಈ ಕಳ್ಳರು ಬುಲ್ಡೋಜರ್ ಹಾಗೂ ಗ್ಯಾಸ್ ಕಟರ್ನ ಸಹಾಯದಿಂದ ಸಂಪೂರ್ಣ ಬ್ರಿಡ್ಜ್ನ್ನೇ ಕಿತ್ತು ಗಾಡಿಯಲ್ಲಿ ಲೋಡ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.
ಆರಾ ಕಾಲುವೆಯಲ್ಲಿರುವ ಶಿಥಿಲಗೊಂಡ ಸೇತುವೆಯನ್ನು 1972ರಲ್ಲಿ ನಿರ್ಮಿಸಲಾಗಿತ್ತು. ನೀರಾವರಿ ಅಧಿಕಾರಿಗಳು ಎಂದು ಹೇಳಿಕೊಂಡ ಕಳ್ಳರು ಸ್ಥಳೀಯ ಅಧಿಕಾರಿಗಳ ಸಹಾಯವನ್ನೂ ಪಡೆದಿದ್ದಾರೆ. ಹಾಡಹಗಲೇ ಕಳ್ಳರು ಸಂಪೂರ್ಣ ಸೇತುವೆಯನ್ನು ಕದ್ದೊಯ್ದಿದ್ದಾರೆ.
ಕಳ್ಳರು ನೀರಾವರಿ ಇಲಾಖೆಯ ಅಧಿಕಾರಿ ಎಂಬ ಸೋಗು ಹಾಕಿಕೊಂಡು ಸಂಪೂರ್ಣ ಸಿದ್ಧತೆಯೊಂದಿಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ದಶಕಗಳಿಂದ ಶಿಥಿಲಗೊಂಡಿದ್ದ ಈ ಕಬ್ಬಿಣದ ಸೇತುವೆಯನ್ನು ಜನರು ಬಳಸಿರಲಿಲ್ಲ. ಈ ಸೇತುವೆಯನ್ನು ತೆಗೆಯುವಂತೆ ಗ್ರಾಮಸ್ಥರು ಸಹ ಅರ್ಜಿ ಸಲ್ಲಿಸಿದ್ದರು ಎಂದು ಮಾಹಿತಿ ನೀಡಿದರು.