ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯ ಚುನಾವಣೆ ಸಂಬಂಧ ಸ್ವಾತ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನದ ಉನ್ನತ ಚುನಾವಣಾ ಆಯೋಗವು ₹ 50,000 ದಂಡ ವಿಧಿಸಿದೆ.
ಸ್ವಾತ್‌ನಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ನಡೆಸುವುದಕ್ಕೆ ಪಾಕ್ ಚುನಾವಣಾ ಆಯೋಗವು ಮಾರ್ಚ್ 15ರಿಂದ ನಿರ್ಬಂಧ ಹೇರಿತ್ತು. ಆದರೆ ಚುನಾವಣಾ ಆಯೋಗದ ಆದೇಶವನ್ನು ನಿರ್ಲಕ್ಷಿಸಿದ ಪ್ರಧಾನಿ ಇಮ್ರಾನ್ ಖಾನ್ ಒಂದು ದಿನದ ಬಳಿಕ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದರು ಎನ್ನಲಾಗಿದೆ.
ಚುನಾವಣಾ ನೀತಿ ಸಂಹಿತೆಯ ಪ್ರಕಾರ, ಸಾರ್ವಜನಿಕ ಕಚೇರಿ ಹೊಂದಿದವರು ಚುನಾವಣೆ ನಡೆಯುವ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ. ಖೈಬರ್ ಪಖ್ತುಂಖ್ವಾ ಸ್ಥಳೀಯ ಆಡಳಿತದ ಎರಡನೇ ಹಂತದ ಚುನಾವಣೆ ಮಾರ್ಚ್ 31 ರಂದು ನಿಗದಿಯಾಗಿದೆ.
ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗವು ಖಾನ್ರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು.