ಪ್ರಾಮಾಣಿಕ ನೌಕರರು ಸಿಕ್ಕರು ಅಂದರೆ ಅದು ಆ ಕಂಪನಿಗೆ ಒಂದು ಆಸ್ತಿ ಸಿಕ್ಕಂತೆಯೇ ಸರಿ. ನಿಷ್ಠಾವಂತ ಉದ್ಯೋಗಿಯು ಅನೇಕ ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಸೇವೆ ಸಲ್ಲಿಸಿದರೆ ಆ ಕಂಪನಿಗೆ ಅದಕ್ಕಿಂತ ದೊಡ್ಡ ಖುಷಿ ವಿಚಾರ ಮತ್ತೊಂದು ಇರೋಕೆ ಸಾಧ್ಯವೇ ಇಲ್ಲ. ಅದೇ ರೀತಿ ತನ್ನ ರಿಟೇಲ್ ಚೈನ್ ಕಂಪನಿಯಲ್ಲಿ ಅನೇಕ ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಕಂಪನಿ ಮಾಲೀಕರ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ ಘಟನೆಯು ಕೇರಳದಲ್ಲಿ ನಡೆದಿದೆ.
ಸಿ.ಆರ್. ಅನೀಶ್ ಎಂಬವರು ಬರೋಬ್ಬರಿ 22 ವರ್ಷಗಳ ಕಾಲ myG ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. myG ಕಂಪನಿ ಸ್ಥಾಪನೆಗೂ ಮುನ್ನವೇ ಮಾಲೀಕನ ಜೊತೆಗೆ ಸಂಪರ್ಕದಲ್ಲಿದ್ದ ಅನೀಶ್ ಕಂಪನಿಯ ಮಾರ್ಕೆಟಿಂಗ್. ನಿರ್ವಹಣೆ, ವ್ಯಾಪಾರ ಹಾಗೂ ಅಭಿವೃದ್ಧಿ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.
ಶಾಜಿ ಶೇರ್ ಮಾಡಿರುವ ಇನ್ನ್ಸ್ಟಾಗ್ರಾಂ ವಿಡಿಯೋದಲ್ಲಿ ತಮ್ಮ ವಿಶ್ವಾಸಾರ್ಹ ಸಿಬ್ಬಂದಿಯನ್ನು ಹಾಡಿಹೊಗಳಿದರು. ಹಾಗೂ ಕಂಪನಿಗಾಗಿ ಸುದೀರ್ಘ ಅವಧಿಯಲ್ಲಿ ದುಡಿದಕ್ಕಾಗಿ ಧನ್ಯವಾದ ಅರ್ಪಿಸಿದರು.
“ನಾನು myG ಯನ್ನು ಪ್ರಾರಂಭಿಸುವ ಮೊದಲು ಕಳೆದ 22 ವರ್ಷಗಳಿಂದ ಅನಿ ನನ್ನೊಂದಿಗೆ ಇದ್ದಾರೆ. ಅವರು ನನಗೆ ಬಲವಾದ ಆಧಾರಸ್ತಂಭವಾಗಿದ್ದಾರೆ. ಅವರು ನನ್ನನ್ನು ಎಂದಿಗೂ ನಿರಾಶೆಗೊಳಿಸಿಲ್ಲ. ಅವರ ಸಹೋದರ ವಾತ್ಸಲ್ಯ ಮತ್ತು ಕೆಲಸದ ಕಡೆಗೆ ಅಪಾರ ಗಮನ ಮತ್ತು ಸಮರ್ಪಣೆ ನನಗೆ ತುಂಬಾ ಬೆಂಬಲ ನೀಡಿತು. ನಾನು ಅನೀಶ್ ಅವರನ್ನು ಪಾಲುದಾರ ಎಂದು ಪರಿಗಣಿಸಿದ್ದೇನೆ. ನಾನು ಅವರನ್ನು ನೌಕರನಂತೆ ಕಂಡಿಲ್ಲ ಎಂದು ಶಾಜಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.