ದ್ವೇಷದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥದ ಸಂದರ್ಭದಲ್ಲಿ 27 ವರ್ಷದ ವ್ಯಕ್ತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆಯೊಂದು ಫರೀದಾಬಾದ್ನ ತಿಗಾಂವ್ ಎಂಬಲ್ಲಿ ನಡೆದಿದೆ. ಈ ಸಂಬಂಧ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ದೂರನ್ನು ದಾಖಲಿಸಿದ್ದಾರೆ.
ತಿಗಾಂವ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಗಳ ವಿರುದ್ಧ ಕಳೆದ ತಿಂಗಳು ದಾಖಲಿಸಿದ ಪ್ರಕರಣವನ್ನು ನೋಡಿದರೆ ಇದು ದ್ವೇಷದ ಕಾರಣಕ್ಕೆ ನಡೆದಿರುವ ಕೊಲೆ ಎನಿಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೃತ ಕಪಿಲ್ ಅದಾನ ತಿಗಾಂವ್ ಗ್ರಾಮದ ನಿವಾಸಿಯಾಗಿದ್ದಾರೆ. ಪೊಲೀಸ್ ದೂರಿನಲ್ಲಿ, ಕಪಿಲ್ ಅವರ ಸಹೋದರ ಸತ್ನಾಮ್ ಅವರು ಸಾಗರ್ ಮತ್ತು ಆಕಾಶ್ ಎಂದು ಗುರುತಿಸಲಾದ ಇಬ್ಬರು ಪುರುಷರು ತಮ್ಮ ಸೋದರಳಿಯ ಸೋನು ಅವರ ಗಾರ್ಮೆಂಟ್ಸ್ ಅಂಗಡಿಗೆ ಡಿಸೆಂಬರ್ 6 ರಂದು ಶಾಪಿಂಗ್ ಮಾಡುವ ನೆಪದಲ್ಲಿ ನುಗ್ಗಿದ್ದರು ಎಂದು ಆರೋಪಿಸಿದ್ದಾರೆ.
“ಆಕಾಶ್ ಮತ್ತು ಸಾಗರ್ ನಮ್ಮ ಸೋದರಳಿಯನ ಮೇಲೆ ಹಲ್ಲೆ ನಡೆಸಿ ಅಂಗಡಿಯಲ್ಲಿದ್ದ 3,500 ರೂ. ದೋಚಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಘಟನೆಯ ನಂತರ ನಾವು ತಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಅಂದಿನಿಂದ ಆರೋಪಿಗಳು ಪ್ರಕರಣವನ್ನು ಹಿಂಪಡೆಯುವಂತೆ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು,” ಎಂದು ಸತ್ನಾಂ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಸತ್ನಾಂ, ಅವರ ಸಹೋದರ ಕಪಿಲ್, ಸೋದರಳಿಯ ಸೋನು ಮತ್ತು ಇನ್ನೊಬ್ಬ ಸಂಬಂಧಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.