33 ವರ್ಷಗಳ ಕಾಲ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ನೌಕರನೊಬ್ಬ ನಿವೃತ್ತಿ ದಿನ ಮಹಾರಾಷ್ಟ್ರ ಪರ ಘೋಷಣೆ ಕೂಗಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ನಗರಪಾಲಿಕೆ ದ್ವಿತೀಯ ದರ್ಜೆ ಸಹಾಯಕ ಶಿವಾಜಿ ಕಳಸೇಕರ ಎಂಬಾತನೇ ಇಂತಹ ಉದ್ಧಟತನ ಮೆರೆದಿರುವ ನೌಕರ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈತ ಮೇ 31ರಂದು ನಿವೃತ್ತಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದ್ದು ಭಾಷಣದ ಬಳಿಕ ಶಿವಾಜಿ ಕಳಸೇಕರ ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿದ್ದಾನೆ.
ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಆತನ ನಿವೃತ್ತಿ ವೇತನವನ್ನು ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ. ಇದರಿಂದ ಗಾಬರಿಗೊಂಡ ಶಿವಾಜಿ ಕಳಸೇಕರ ಈಗ ಕ್ಷಮೆ ಕೋರಿ ಬೆಳಗಾವಿ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾನೆ ಎಂದು ಹೇಳಲಾಗಿದೆ.