ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ತಾವು ನಿವೃತ್ತಿಯಾಗುವ ಒಂದು ದಿನ ಮೊದಲು ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ.
ಸಾಲಿಗ್ರಾಮ ಠಾಣೆಯ ಸಬ್ ಇನ್ಸ್ಪೆಕ್ಟರ್ ದೊಡ್ಡೇಗೌಡ ಬುಧವಾರ ಮುಂಜಾನೆ ಕರ್ತವ್ಯದಲ್ಲಿದ್ದಾಗ ವಿಧಿವಶರಾಗಿದ್ದಾರೆ. ಸುದೀರ್ಘ 33 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಜೂನ್ 30ರ ಗುರುವಾರದಂದು ಸೇವೆಯಿಂದ ನಿವೃತ್ತಿಯಾಗಬೇಕಿತ್ತು.
ದೊಡ್ಡೇಗೌಡ ಅವರ ಅಂತ್ಯಕ್ರಿಯೆಯನ್ನು ಹುಣಸೂರು ತಾಲೂಕು ಬಿಳಿಗೆರೆ ಗ್ರಾಮದ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗಿದ್ದು, ಈ ಸಂದರ್ಭದಲ್ಲಿ ಶಾಸಕ ಸಾರಾ ಮಹೇಶ್, ಡಿ ವೈ ಎಸ್ ಪಿ ಸುಮಿತ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.