ಲೇಖಕ ಸುಧಾಕರ್ ಎಸ್.ಬಿ. ಅವರು ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟಿಗ ಇಮ್ರಾನ್ ಖಾನ್ ಕುರಿತು ಬರೆದಿರುವ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕಥೆ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಗುರುವಾರದಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಏರ್ಪಡಿಸಲಾಗಿದ್ದು, ಆದರೆ ಇದಕ್ಕೆ ಹಿಂದೂ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು.
ಪಾಕಿಸ್ತಾನ, ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದೆ. ಹೀಗಾಗಿ ಆ ದೇಶದೊಂದಿಗೆ ಎಲ್ಲ ವ್ಯವಹಾರಗಳನ್ನು ಭಾರತ ನಿಲ್ಲಿಸಿದೆ. ಅಲ್ಲದೆ ಇಮ್ರಾನ್ ಖಾನ್ ಪ್ರಧಾನಿಯಾದ ಸಂದರ್ಭದಲ್ಲೂ ಅದು ಮುಂದುವರೆದಿತ್ತು. ಇಂತಹ ವ್ಯಕ್ತಿಯನ್ನು ವೈಭವೀಕರಿಸುವ ಪುಸ್ತಕ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಹಿಂದೂ ಜನ ಜಾಗೃತಿ ಸಮಿತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿತ್ತು.
ಹೀಗಾಗಿ ಕಲಾಗ್ರಾಮದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿದ್ದ ಅಧಿಕಾರಿಗಳು ಈ ಕುರಿತ ಫಲಕವನ್ನು ಗೇಟ್ ಮುಂದೆ ಹಾಕಿದ್ದರು. ಇದಾದ ಬಳಿಕ ಲೇಖಕ ಸುಧಾಕರ್ ತಮ್ಮ ಮನೆಯಲ್ಲಿಯೇ ಕಾರ್ಯಕ್ರಮ ನಡೆಸಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿ ಲೀಲಾದೇವಿ ಆರ್ ಪ್ರಸಾದ್, ವಡ್ಡಗೆರೆ ನಾಗರಾಜಯ್ಯ ಮೊದಲಾದವರಿದ್ದರು.