ಕೋಲ್ಕತ್ತಾ: ಟ್ರಾಫಿಕ್ ಪೊಲೀಸ್ ಒಬ್ಬರು ಟ್ರಾಫಿಕ್ ಅನ್ನು ನಿರ್ವಹಿಸುವಾಗ ಬಾಲಕನೊಬ್ಬನಿಗೆ ಪಾಠ ಕಲಿಸುತ್ತಿರುವ ಚಿತ್ರ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸಾರ್ಜೆಂಟ್ ಪ್ರಕಾಶ್ ಘೋಷ್ ಎಂದು ಗುರುತಿಸಲಾದ ಪೊಲೀಸ್, ಕೋಲ್ಕತ್ತಾದಲ್ಲಿ ಟ್ರಾಫಿಕ್ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಾರೆ.
ತಮ್ಮ ಕರ್ತವ್ಯದ ಜೊತೆಗೆ ಅವರು ಸೂರಿಲ್ಲದ ಬೀದಿ-ಬದಿಯ ಬಾಲಕನಿಗೆ ಅಕ್ಷರ ಜ್ಞಾನ ಹೇಳಿಕೊಡುತ್ತಿದ್ದಾರೆ. ಟ್ರಾಫಿಕ್ ಪೊಲೀಸ್ ಬಾಲಕನಿಗೆ ಶಿಕ್ಷಕರಾಗಿ ಕಲಿಸುತ್ತಿರುವ ದೃಶ್ಯವನ್ನು ಸ್ಥಳೀಯ ಪತ್ರಕರ್ತರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಬಾಲಕನು ಮರದ ಕೆಳಗೆ ಕುಳಿತು ನೋಟ್‌ಬುಕ್‌ನಲ್ಲಿ ಬರೆಯುತ್ತಿದ್ದರೆ, ಟ್ರಾಫಿಕ್ ಪೊಲೀಸ್ ಸಾರ್ಜೆಂಟ್ ಘೋಷ್ ಅವರು ಕೈಯಲ್ಲಿ ಕೋಲು ಹಿಡಿದು ಆತನಿಗೆ ಕಲಿಸುತ್ತಿದ್ದಾರೆ. ಬಾಲಕನ ಪಕ್ಕದಲ್ಲಿ ಶಾಲಾ ಚೀಲ, ಪೆನ್ಸಿಲ್ ಬಾಕ್ಸ್ ಇರೋದನ್ನು ಚಿತ್ರದಲ್ಲಿ ಗಮನಿಸಬಹುದು.
ಈ ಹೃದಯಸ್ಪರ್ಶಿ ಫೋಟೋವನ್ನು ಕೋಲ್ಕತ್ತಾ ಪೊಲೀಸರು ಹಂಚಿಕೊಂಡಿದ್ದಾರೆ. ಹಾಗೂ ಸಾರ್ಜೆಂಟ್ ಘೋಷ್ ಬಾಲಕನಿಗೆ ಹೇಗೆ ಮಾರ್ಗದರ್ಶಕರಾದರು ಎಂಬುದನ್ನು ವಿವರಿಸಲಾಗಿದೆ.
ಸದ್ಯ, ಈ ಫೋಟೋ ವೈರಲ್ ಆಗಿದ್ದು, ಬಾಲಕನಿಗೆ ಮಾರ್ಗದರ್ಶನ ನೀಡಲು ಹೊರಟಿದ್ದಕ್ಕಾಗಿ ಪೊಲೀಸ್ ಅನ್ನು ಹೀರೋ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಅವರ ಈ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಫೋಟೋ ನೆಟ್ಟಿಗರ ಹೃದಯಗೆದ್ದಿದೆ ಎಂದರೆ ತಪ್ಪಾಗಲಾರದು.