ವಿಜಯಪುರ : ನಾನು ನಿರಾಣಿಯಂತಹ ವ್ಯಕ್ತಿಗಳಿಗೆ ಹೆದರಿ ರಾಜಕೀಯ ಮಾಡುವವನು ಅಲ್ಲ. ಅವನನ್ನು ನಮ್ಮ ಪಕ್ಷಕ್ಕೆ ಕರೆತಂದು ಟಿಕೆಟ್ ಸಿಗುವಂತೆ ಮಾಡಿದವನು ನಾನು. ಅಂತಹ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ನಿರಾಣಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ, ನಾವು ಬೇರೆ ಪಕ್ಷ ಕಟ್ಟುವ ಚಟವಿದ್ದವರು ಅಲ್ಲ. ಹೊಸ ಪಕ್ಷ ಕಟ್ಟಲು ನಾವೇನು ಲೂಟಿ ಮಾಡಿಲ್ಲ. ಅಂತಹ ಹಣ ಇದ್ದಿದ್ದರೆ ನಾವೂ ಹೊಸ ಪಕ್ಷ ಕಟ್ಟುತ್ತಿದ್ದೆವು. ಆದರೆ, ನಾವು ಪ್ರಾಮಾಣಿಕವಾಗಿ ರಾಜಕೀಯ ಮಾಡಿದ್ದೇವೆ. ಬಿಜೆಪಿಯನ್ನು ಬೆಳೆಸಿದ್ದೇವೆ. ಹೀಗಾಗಿ ಪಕ್ಷದಲ್ಲಿಯೇ ಇರುತ್ತವೆ. ಪಕ್ಷವನ್ನು ಬೆಳೆಸುತ್ತೇವೆ ಎಂದು ಹೇಳಿದ್ದಾರೆ.
ನಾವು ಯಾರನ್ನೂ ಬ್ಲಾಕ್ ಮೇಲ್ ಮಾಡುವುದಿಲ್ಲ. ನಮ್ಮ ನಾಯಕರ ಮೇಲೆ ನಮಗೆ ಮೊದಲಿನಿಂದಲೂ ವಿಶ್ವಾಸವಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಿಎಂ ಅವರೊಂದಿಗೆ ನಾನು ಎಲ್ಲ ವಿಷಯವನ್ನು ಚರ್ಚಿಸಿದ್ದೇನೆ. ದೇವರ ಸಾಕ್ಷಿಯಾಗಿ ನಾವು ಪಕ್ಷ ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಜಯಪುರ ಜಿಲ್ಲೆಗೆ ಮಂತ್ರಿ ಸ್ಥಾನ ತಪ್ಪಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುವುದು ಪಕ್ಕಾ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ.