alex Certify ನಿರಂತರವಾಗಿ ಸ್ಮಾರ್ಟ್‌ ಫೋನ್‌ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ವೈದ್ಯರೊಬ್ಬರು ಮಾಡಿರುವ ಈ ಟ್ವೀಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಂತರವಾಗಿ ಸ್ಮಾರ್ಟ್‌ ಫೋನ್‌ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ವೈದ್ಯರೊಬ್ಬರು ಮಾಡಿರುವ ಈ ಟ್ವೀಟ್..!

ನಮ್ಮ ದೈನಂದಿನ ದಿನಚರಿ ಆರೋಗ್ಯದ ಸ್ಥಿತಿಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ದುರಭ್ಯಾಸಗಳನ್ನು ಬಿಡದೇ ಇದ್ದರೆ ಅದರ ಪರಿಣಾಮ ಕೆಲವೊಮ್ಮೆ ಭಯಾನಕವಾಗಿರುತ್ತದೆ. ಈ ಕುರಿತಂತೆ ತಾಜಾ ನಿದರ್ಶನವೊಂದನ್ನು ಹೈದರಾಬಾದ್‌ನ ಡಾ. ಸುಧೀರ್ ಕುಮಾರ್, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಂತ್ರಜ್ಞಾನ ಜಗತ್ತಿನ ಮೂಲೆ ಮೂಲೆ ತಲುಪಿರುವ ಈ ಡಿಜಿಟಲ್ ಯುಗದಲ್ಲಿ ಈ ಘಟನೆ ಸಾಮಾನ್ಯ ಜನರ ಕಣ್ಣು ತೆರೆಸುತ್ತದೆ. ಯುವತಿಯೊಬ್ಬಳು ಸ್ಮಾರ್ಟ್‌ಫೋನ್‌ನಿಂದ ತನ್ನ ದೃಷ್ಟಿಯನ್ನೇ ಕಳೆದುಕೊಂಡಿರುವ ಬಗ್ಗೆ ಡಾ.ಸುಧೀರ್‌ ಟ್ವೀಟ್‌ ಮಾಡಿದ್ದಾರೆ.

30 ವರ್ಷದ ಮಂಜು ಅವರು ಸುಮಾರು ಒಂದೂವರೆ ವರ್ಷಗಳ ಸತತವಾಗಿ ಸ್ಮಾರ್ಟ್‌ ಫೋನ್‌ ವೀಕ್ಷಣೆ ಮಾಡುತ್ತಿದ್ದರು. ಕತ್ತಲೆಯಲ್ಲಿ ನಿರಂತರವಾಗಿ ಫೋನ್‌ ವೀಕ್ಷಿಸಿದ್ದರಿಂದ ಇದೀಗ ಕುರುಡುತನದಿಂದ ಬಳಲುತ್ತಿದ್ದಾರೆ. ವೈದ್ಯರ ಪ್ರಕಾರ, ಫ್ಲೋಟರ್‌ಗಳು, ತೀವ್ರವಾದ ಬೆಳಕಿನ ಹೊಳಪುಗಳು ಸಾಂದರ್ಭಿಕವಾಗಿ ದೃಷ್ಟಿ ಕೊರತೆಗೆ ಕಾರಣವಾಗಿವೆ. ರಾತ್ರಿ ರೆಸ್ಟ್‌ ರೂಮ್‌ಗೆ ತೆರಳಲು ಎದ್ದ ಸಂದರ್ಭದಲ್ಲೆಲ್ಲ ಆಕೆಗೆ ಕಣ್ಣೇ ಕಾಣಿಸುತ್ತಿರಲಿಲ್ಲ. ಕಣ್ಣಿನ ತಜ್ಞರು ವಿವರವಾದ ಮೌಲ್ಯಮಾಪನ ಮಾಡಿದಾಗ ಸಮಸ್ಯೆ ಬೆಳಕಿಗೆ ಬಂದಿದೆ. ಕುರುಡುತನಕ್ಕೆ ನರಗಳ ಸಮಸ್ಯೆ ಕಾರಣವಲ್ಲ ಅನ್ನೋದು ವೈದ್ಯರ ಅಭಿಪ್ರಾಯ.

ಮಗುವನ್ನು ನೋಡಿಕೊಳ್ಳಲು ಆಕೆ ಬ್ಯೂಟಿಷಿಯನ್ ಕೆಲಸವನ್ನು ತೊರೆದ ನಂತರ ರೋಗಲಕ್ಷಣಗಳು ಪ್ರಾರಂಭವಾದವು. ಆಕೆ ಪ್ರತಿದಿನ ಹಲವಾರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಮೂಲಕ ಬ್ರೌಸ್ ಮಾಡುವ ಹೊಸ ಅಭ್ಯಾಸವನ್ನು ಬೆಳೆಸಿಕೊಂಡಿದ್ದಳು. ರಾತ್ರಿ ಲೈಟ್‌ ಆಫ್‌ ಆದ ಬಳಿಕ ಗಂಟೆಗಟ್ಟಲೆ ಮೊಬೈಲ್‌ ವೀಕ್ಷಿಸುತ್ತಿದ್ದಳು. ಇದನ್ನೆಲ್ಲ ಅರಿತ ವೈದ್ಯರು ರೋಗನಿರ್ಣಯವು ಈಗ ಸ್ಪಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮಹಿಳೆ ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್ (SVS) ನಿಂದ ಬಳಲುತ್ತಿದ್ದಳು. ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ಗಳಂತಹ ಡಿವೈಸ್‌ಗಳ  ದೀರ್ಘಾವಧಿಯ ಬಳಕೆಯು “ಕಂಪ್ಯೂಟರ್ ವಿಷನ್ ಸಿಂಡ್ರೋಮ್” (CVS) ಅಥವಾ “ಡಿಜಿಟಲ್ ವಿಷನ್ ಸಿಂಡ್ರೋಮ್”ಗೆ ಕಾರಣವಾಗುತ್ತದೆ.

ಮಹಿಳೆಯ ದೃಷ್ಟಿದೋಷಕ್ಕೆ ಸಂಭವನೀಯ ಕಾರಣಗಳನ್ನು ಕಂಡುಕೊಂಡಿರುವ ವೈದ್ಯರು ಯಾವುದೇ ಔಷಧಗಳನ್ನು ಶಿಫಾರಸು ಮಾಡಿಲ್ಲ. ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸಿದ್ದಾರೆ. ಇದ್ದಕ್ಕಿದ್ದಂತೆ ದೃಷ್ಟಿದೋಷ ಕಾಣಿಸಿಕೊಂಡಿದ್ದರಿಂದ ಮೆದುಳಿನ ನರಗಳಿಗೆ ಹಾನಿಯಾಗಿರಬಹುದು ಎಂದು ಮಂಜು ಆತಂಕಕ್ಕೊಳಗಾಗಿದ್ದಳು. ವೈದ್ಯರ ಸಲಹೆಯಂತೆ ಸ್ಮಾರ್ಟ್‌ ಫೋನ್‌ ಬಳಕೆಯನ್ನು ಬಹುತೇಕ ಬಂದ್‌ ಮಾಡಿದ ಬಳಿಕ ಆಕೆಯ 18 ತಿಂಗಳ ದೃಷ್ಟಿ ದೋಷ ಮಾಯವಾಗಿತ್ತು. ಈಗ ಅವಳು ಸಾಮಾನ್ಯ ದೃಷ್ಟಿ ಹೊಂದಿದ್ದಾಳೆ. ರಾತ್ರಿಯಲ್ಲಿ ಅವಳ ಕ್ಷಣಿಕ ದೃಷ್ಟಿ ನಷ್ಟವೂ ನಿಂತುಹೋಗಿದೆ.

ಸ್ಮಾರ್ಟ್‌ಫೋನ್‌ ಬಳಕೆಯಿಂದಲೇ ಮಂಜುಗೆ ದೃಷ್ಟಿದೋಷ ಕಾಣಿಸಿಕೊಂಡಿತ್ತು ಅನ್ನೋದು ಇದರಿಂದ ದೃಢಪಟ್ಟಿದೆ. ಪ್ರತಿನಿತ್ಯ ಗಂಟೆಗಟ್ಟಲೆ ಸ್ಮಾರ್ಟ್‌ಫೋನ್‌ ವೀಕ್ಷಿಸುವವರಿಗೆ ಡಾ.ಸುಧೀರ್‌ ಕಿವಿಮಾತು ಕೂಡ ಹೇಳಿದ್ದಾರೆ. ಡಿಜಿಟಲ್ ಸಾಧನಗಳ ಪರದೆಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ, ಏಕೆಂದರೆ ಇದು ದೃಷ್ಟಿಗೆ ಸಂಬಂಧಿಸಿದ ತೀವ್ರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಡಿಜಿಟಲ್ ಸ್ಕ್ರೀನ್‌ ಅನ್ನು ಬಳಸುವಾಗ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಣ್ಣುಗಳಿಗೆ ವಿರಾಮ ನೀಡಬೇಕು ಎಂಬುದು ಅವರ ಸಲಹೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...