ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ರಿಗೂ ಗೊತ್ತಿದೆ. ಇದೆಲ್ಲಾ ಗೊತ್ತಿದ್ದರೂ ಲಕ್ಷಾಂತರ ಮಂದಿ ಸಿಗರೇಟ್‌ಗೆ ದಾಸರಾಗಿದ್ದಾರೆ. ಚೀನಾದಲ್ಲೊಬ್ಬ ಭೂಪ ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್ ಸೇದುತ್ತ ಮ್ಯಾರಥಾನ್ ಓಡಿದ್ದಾನೆ. ಚೀನಾದ ಈ ವ್ಯಕ್ತಿಯ ಹುಚ್ಚು ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗುತ್ತಿದೆ. ಇದರ ಜೊತೆಜೊತೆಗೆ ಮೂರುವರೆ ಗಂಟೆಗಳ ಕಾಲ ಸಿಗರೇಟ್ ಸೇದುತ್ತ ಓಡಿದ ವೃದ್ಧನ ಗಟ್ಟಿತನವನ್ನೂ ನೆಟ್ಟಿಗರು ಹೊಗಳಿದ್ದಾರೆ.
ಅಂಕಲ್ ಚೆನ್ ಎಂದೇ ಫೇಮಸ್ ಆಗಿರುವ ಈತನಿಗೆ 50 ವರ್ಷ. ಈತ ಜಿಯಾಂಡೆಯಲ್ಲಿ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದ್ದಾನೆ. ಒಟ್ಟು 26.2 ಮೈಲಿ ಓಡಿದ್ದಾನೆ, ಓಟದುದ್ದಕ್ಕೂ ಸಿಗರೇಟ್ ಸೇದುತ್ತಲೇ ಇದ್ದ. ಚೆನ್ ತಂಬಾಕು ವ್ಯಸನಿಯಾಗಿದ್ದಾನಂತೆ. 3 ಗಂಟೆ 28 ನಿಮಿಷ ಮತ್ತು 45 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದಾನೆ. ಸುಮಾರು ಒಂದೂವರೆ ಸಾವಿರ ಸ್ಪರ್ಧಿಗಳು ಈ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಅವರ ಪೈಕಿ ಅಂಕಲ್ ಚೆನ್ 574ನೇ ಸ್ಥಾನ ಪಡೆದಿದ್ದಾನೆ.
ಇದು ಅಂಕಲ್ ಚೆನ್‌ರ ಮೊದಲ ಮ್ಯಾರಥಾನ್ ಓಟವಲ್ಲ. 2018 ರಲ್ಲಿ ಈತ ಗುವಾಂಗ್‌ಝೌ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು 3 ಗಂಟೆ 36 ನಿಮಿಷಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದ. 2019ರ ಕ್ಸಿಯಾಮೆನ್ ಮ್ಯಾರಥಾನ್ ಅನ್ನು 3 ಗಂಟೆ ಮತ್ತು 32 ನಿಮಿಷಗಳಲ್ಲಿ ಓಡಿದ್ದ. ಧೂಮಪಾನವು ತನ್ನ ಕಾರ್ಯಕ್ಷಮತೆಗೆ ಅಡ್ಡಿಯಾಗುವುದಿಲ್ಲ ಅನ್ನೋದನ್ನು ಪ್ರದರ್ಶಿಸುವುದೇ ಈತನ ಉದ್ದೇಶವಂತೆ.