ಬದಲಾದ ಜೀವನ ಶೈಲಿ, ರಾಸಾಯನಿಕಗಳುಳ್ಳ ಆಹಾರ ಪದಾರ್ಥಗಳಿಂದಾಗಿ ಹೃದಯಾಘಾತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯವನ್ನು ಫಿಟ್ ಆಗಿಡಲು ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆಯೂ ಅತ್ಯವಶ್ಯ.
ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಹೃದಯದ ತೊಂದರೆಯ ಜೊತೆಗೆ ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆ ಕೂಡ ನಿಮ್ಮನ್ನು ಕಾಡಬಹುದು. ಹಾಗಾಗಿ ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಅತ್ಯಗತ್ಯ. ಈಗಾಗ್ಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರಂತೂ ನಿದ್ದೆಯ ಬಗ್ಗೆ ಗಮನಹರಿಸಲೇಬೇಕು.
ಹೃದಯ ಆರೋಗ್ಯವಾಗಿರಬೇಕು ಅಂದ್ರೆ ನೀವು ಪ್ರತಿದಿನ ರಾತ್ರಿ 10 ರಿಂದ 11 ಗಂಟೆಯೊಳಗೆ ಮಲಗಿಬಿಡಬೇಕು. 43 ರಿಂದ 79 ವರ್ಷ ವಯಸ್ಸಿನ ಸುಮಾರು 88,000 ಜನರನ್ನು ಸಂಶೋಧನೆಗೆ ಒಳಪಡಿಸಿದ ವೈದ್ಯರ ತಂಡ ಈ ತೀರ್ಮಾನಕ್ಕೆ ಬಂದಿದೆ.
ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ರೆ ಅತ್ಯವಶ್ಯಕವಾಗಿದೆ. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವ ದುರಭ್ಯಾಸ ಒಳ್ಳೆಯದಲ್ಲ. ನಿಮ್ಮ ಹೃದಯ ಫಿಟ್ ಆಗಿರಬೇಕೆಂದರೆ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಿ. ಹೀಗೆ ಮಾಡುವುದರಿಂದ ದಿನವಿಡೀ ಚಟುವಟಿಕೆಯಿಂದಿರಬಹುದು. ಹೀಗೆ ಮಾಡುವುದರಿಂದ ಬೊಜ್ಜಿನ ಸಮಸ್ಯೆಯೂ ಕಾಡುವುದಿಲ್ಲ. ಹೃದಯವೂ ಸೇಫ್ ಆಗಿರುತ್ತದೆ.