ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ.
ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು ಪಾಯಸ ಇತ್ಯಾದಿಗಳಿಗೆ ಬಳಸುವ ಒಣದ್ರಾಕ್ಷಿ ಬೆಕ್ಕಿನ ಪ್ರಾಣಕ್ಕೆ ಹಾನಿಕರ. ಒಂದು ಹಿಡಿಯಷ್ಟು ದ್ರಾಕ್ಷಿ ಬೆಕ್ಕಿನ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಒಮ್ಮೆ ಬೆಕ್ಕು ಒಣದ್ರಾಕ್ಷಿಯನ್ನು ತಿಂದಿದೆಯೆಂದಾದರೆ ಅದಕ್ಕೆ 24ಗಂಟೆಯ ಒಳಗೆ ಅತಿಸಾರ, ಹಸಿವಿನ ಕೊರತೆ, ಅತಿನಿದ್ರೆ, ಅಶಕ್ತತೆ, ಹೊಟ್ಟೆ ನೋವು, ಮೂತ್ರ ಕಡಿಮೆ ಹೋಗುವುದು ಮುಂತಾದ ತೊಂದರೆಗಳು ಆಗುತ್ತದೆ.
ಈರುಳ್ಳಿ: ನಾವು ತಿನ್ನುವ ಹಸಿ ಈರುಳ್ಳಿ ಬೆಕ್ಕಿಗೆ ಒಳ್ಳೆಯದಲ್ಲ. ಇದರಲ್ಲಿರುವ ಸಲ್ಫೊಕ್ಸೈಡ್ ಮತ್ತು ಡಿಸಲ್ಫೋಕ್ಸೈಡ್ ಬೆಕ್ಕಿನ ಕೆಂಪು ರಕ್ತ ಜೀವಕೋಶಗಳನ್ನು ನಾಶಪಡಿಸಿ ರಕ್ತಹೀನತೆ ಸೇರಿದಂತೆ ಗಂಭೀರ ಸಮಸ್ಯೆಗಳಾಗುತ್ತವೆ.
ಬೆಳ್ಳುಳ್ಳಿ: ನಾವು ಒಗ್ಗರಣೆಗೆ ಹಾಗೂ ಇದರ ಆಹಾರ ಪದಾರ್ಥಗಳಲ್ಲಿ ಬಳಸುವ ಬೆಳ್ಳುಳ್ಳಿ ಬೆಕ್ಕಿಗೆ ಹಾನಿಕಾರಕ.
ಹಸಿ ಮೊಟ್ಟೆ: ಹಸಿ ಮೊಟ್ಟೆ ಬೆಕ್ಕಿಗೆ ವರ್ಜ್ಯ. ಇದರಲ್ಲಿರುವ ‘ಇ.ಕೊಲಿ’ ತುಂಬ ಅಪಾಯವಾಗಿದ್ದು, ಪಿಇಟಿ ಯಂತಹ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗದಲ್ಲಿರುವ ಎವಿಡಿನ್, ವಿಟಮಿನ್ ‘ಬಿ’ಯ ಹೀರುವಿಕೆಯನ್ನು ನಿಲ್ಲಿಸುತ್ತದೆ.
ಆಲ್ಕೋಹಾಲ್: ಬೆಕ್ಕಿಗೆ ಮದ್ಯ ನೀಡಬಾರದು. ಇದು ಬೆಕ್ಕಿಗೆ ವಿಷಕಾರಿ.
ಕಾಫಿ, ಟೀ: ನಾವು ಕುಡಿಯುವ ಟೀ, ಕಾಫಿ ಬೆಕ್ಕಿನ ಮೂತ್ರವರ್ಧಕಕ್ಕೆ ಕಾರಣವಾಗುತ್ತದೆ. ಇದು ಹೃದಯ ಮತ್ತು ನರಮಂಡಲವನ್ನು ಕೆಡಿಸುತ್ತದೆ.
ಕೊಬ್ಬಿನ ಆಹಾರ: ಕೊಬ್ಬು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ. ಆದರೆ ಬೇಯಿಸಿದ ಕೊಬ್ಬಿನ ಆಹಾರ ಬೆಕ್ಕಿಗೆ ವಾಂತಿ, ಬೇಧಿ ಸೇರಿದಂತೆ ಹೊಟ್ಟೆಯಲ್ಲಿ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ.
ಮೂಳೆಗಳು: ಕೋಳಿಯ ಮೂಳೆ ಮತ್ತು ಇತರ ಮೂಳೆ ಬೆಕ್ಕಿಗೆ ತುಂಬ ಅಪಾಯಕಾರಿ. ಮೂಳೆಯ ಯಾವುದಾದರೂ ಒಂದು ಭಾಗ ಸರಿಯಾಗಿ ಬೇಯದೇ ಇದ್ದಲ್ಲಿ ಅದರ ತುಣುಕು ಆಂತರಿಕ ಸೀಳುವಿಕೆ ಉಂಟುಮಾಡುತ್ತದೆ.