ಚಾಕಲೇಟ್ ಅಂದ್ರೆ ಮಕ್ಕಳಿಗೆ ಫೇವರಿಟ್. ಚಾಕಲೇಟ್ ನೋಡಿದ ತಕ್ಷಣ ಮಕ್ಕಳ ಮುಖದಲ್ಲಿ ನಗು ಮೂಡುತ್ತದೆ. ಆದರೆ ಮಗು ಅತಿಯಾಗಿ ಚಾಕಲೇಟ್ ತಿಂದರೆ ಅಪಾಯ ಖಚಿತ. ಸೀಸ ಮತ್ತು ಕ್ಯಾಡ್ಮಿಯಮ್‌ನಂತಹ ಹಾನಿಕಾರಕ ಅಂಶಗಳು ಚಾಕಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಚಾಕಲೇಟ್‌ನಲ್ಲಿರುವ ಕೆಫೀನ್ ಮತ್ತು ಸಕ್ಕರೆ ಕೂಡ ಮಕ್ಕಳಿಗೆ ಹಾನಿ ಮಾಡುತ್ತದೆ. ಅಧಿಕ ಚಾಕೊಲೇಟ್ ತಿನ್ನುವುದರಿಂದ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ವೈಫಲ್ಯ, ಬೊಜ್ಜು ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಕ್ಕಳು ಹೆಚ್ಚು ಚಾಕಲೇಟ್ ತಿನ್ನಲು ಬಿಡಬಾರದು.
ಚಾಕಲೇಟ್ ಸೇವನೆಯಿಂದ ಮಕ್ಕಳಿಗಾಗುವ ಅಪಾಯ…
ಚಾಕಲೇಟ್‌ನಲ್ಲಿ ಸೀಸ ಮತ್ತು ಕ್ಯಾಡ್ಮಿಯಮ್‌ನಂತಹ ಭಾರವಾದ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡದ ಕಾಯಿಲೆಗಳ ಅಪಾಯವಿದೆ. ಮಗು ಅತಿಯಾಗಿ ಚಾಕಲೇಟ್ ತಿನ್ನುವ ಅಭ್ಯಾಸ ಮಾಡಿಕೊಂಡರೆ ದೀರ್ಘಾವಧಿಯಲ್ಲಿ ಅದು ಹಾನಿಕಾರಕವಾಗುತ್ತದೆ. ಕ್ಯಾಡ್ಮಿಯಂ ಅನ್ನು ಸೇವಿಸುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಇದು ಶ್ವಾಸಕೋಶ ಮತ್ತು ಯಕೃತ್ತನ್ನು ಕೂಡ ಹಾನಿಗೊಳಿಸುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಳ
ಚಾಕಲೇಟ್‌ನಲ್ಲಿ ಕೆಫೀನ್ ಮತ್ತು ಸಕ್ಕರೆ ಇರುವುದರಿಂದ ರಕ್ತದೊತ್ತಡವನ್ನು ಅದು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಚಾಕಲೇಟ್ ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕೂಡ ಹೆಚ್ಚಾಗುತ್ತದೆ. ಇದರಿಂದಾಗಿ ಅಪಧಮನಿಗಳಲ್ಲಿ ಅಡಚಣೆ ಉಂಟಾಗಬಹುದು.
ನಿದ್ರೆಯ ಮೇಲೆ ಪರಿಣಾಮ
ಚಾಕಲೇಟ್ ತಿನ್ನುವುದರಿಂದ ದೇಹದಲ್ಲಿ ಕೆಫೀನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ನಿದ್ದೆಯ ಕೊರತೆ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಸಾಕಷ್ಟು ನಿದ್ರೆ ಮಾಡದೇ ಇದ್ದಾಗ ಕೆರಳಿಬಿಡುತ್ತಾರೆ. ನಿರಾಸಕ್ತಿ ಕೂಡ ಅವರನ್ನು ಆವರಿಸಿಕೊಳ್ಳುತ್ತದೆ. ನೆನಪಿನ ಶಕ್ತಿ, ಏಕಾಗ್ರತೆಯ ಸಾಮರ್ಥ್ಯ ಮತ್ತು ಕಲಿಯುವ ಸಾಮರ್ಥ್ಯದ ಮೇಲೆ ನಿದ್ದೆಯ ಕೊರತೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳಿಗೆ ಅಪ್ಪಿತಪ್ಪಿಯೂ ರಾತ್ರಿ ಚಾಕಲೇಟ್ ಕೊಡಬಾರದು. ಸರಿಯಾದ ಸಮಯಕ್ಕೆ ಮಕ್ಕಳು ನಿದ್ದೆ ಮಾಡುವಂತೆ ಎಚ್ಚರಿಕೆ ವಹಿಸಬೇಕು. ಇದು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.