ಮಕ್ಕಳು ನಿದ್ರಿಸುವಾಗ ಬೆಚ್ಚಿ ಬೀಳುವುದು, ಕನಸು ಕಂಡು ಅಳುವುದು, ಕನವರಿಸುವುದು, ನಿದ್ರೆಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಸಹಜ. ಅದೇ ಮಗು ದೊಡ್ಡದಾದಂತೆ ಈ ರೀತಿಯ ಪ್ರಕ್ರಿಯೆಗಳು ಕಡಿಮೆಯಾಗುತ್ತಾ ಬರುತ್ತದೆ.
ಆದರೆ ಕೆಲವು ಮಕ್ಕಳು ಮಾತ್ರ ಶಾಲೆಗೆ ಹೋಗಲು ಪ್ರಾರಂಭಿಸಿದರೂ, ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಾರೆ. ಇದು ಅವರು ತಿಳಿದು ಮಾಡುವ ಕೆಲಸವಲ್ಲ, ಅವರಿಗೆ ತಿಳಿಯದ ಹಾಗೆ ಆಗುತ್ತದೆ. ಈ ವಿಷಯದ ಕುರಿತು ಅತಿಯಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವು ಮುನ್ನೆಚ್ಚರಿಕೆಯನ್ನು ವಹಿಸಿದರೆ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ತಡೆಯಬಹುದು.
* ಮಕ್ಕಳಿಗೆ ಭೂತ, ದೆವ್ವ, ಗುಮ್ಮ ಎಂದು ಹೆದರಿಸುವುದನ್ನು ನಿಲ್ಲಿಸಬೇಕು. ಈ ರೀತಿ ಹೆದರಿಸುವುದು ಅಥವಾ ಕಥೆ ಹೇಳುವುದರಿಂದ ಮಕ್ಕಳು ನಿದ್ರೆಯಲ್ಲಿ ಅದೇ ರೀತಿಯ ಕನಸುಗಳನ್ನು ಕಂಡು ಹೆದರಿ ಮೂತ್ರ ಮಾಡುವ ಸಾಧ್ಯತೆಗಳಿರುತ್ತವೆ.
* ರಾತ್ರಿ ಮಲಗುವ ಮುನ್ನ ಹಾಲು, ನೀರು, ಜ್ಯೂಸ್ ಮಕ್ಕಳಿಗೆ ಕುಡಿಸಬಾರದು.
* ಸಂಜೆ ಏಳು ಗಂಟೆಯ ನಂತರ ಸಿಟ್ರಿಕ್ ಆಮ್ಲ ಇರುವ ಪದಾರ್ಥ ಅಥವಾ ಹಣ್ಣನ್ನು ತಿನ್ನಿಸಬಾರದು. ಹಾಗೆ ಮಾಡಿದರೆ ಮೂತ್ರ ಮಾಡಿಕೊಳ್ಳುವ ಅವಕಾಶ ಹೆಚ್ಚು.
* ಊಟ ಮಾಡುವಾಗ ಹೆಚ್ಚು ನೀರು ಕುಡಿಯುತ್ತಾ ಊಟ ಮಾಡುವುದನ್ನು ತಡೆಯಬೇಕು. ಯಾಕೆಂದರೆ ಎಷ್ಟು ನೀರು ಕುಡಿದಿದ್ದಾರೆ ಎನ್ನುವ ಲೆಕ್ಕವಿರುವುದಿಲ್ಲ.
* ಮಕ್ಕಳು ಹಾಸಿಗೆ ಒದ್ದೆ ಮಾಡಿಕೊಂಡು ಅದರಲ್ಲೇ ಮಲಗಿರದಂತೆ ನೋಡಿಕೊಳ್ಳಬೇಕು. ರಾತ್ರಿಯಿಂದ ಬೆಳಗಿನವರೆಗೂ ಒದ್ದೆಬಟ್ಟೆಯಲ್ಲಿ ಮಲಗಿದ್ದರೆ, ಅವರ ತ್ವಚೆ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ.
* ನಿಮ್ಮ ಮಕ್ಕಳ ಎದುರು ಬೇರೆಯವರ ಬಳಿ ನಮ್ಮ ಮಗು ಹಾಸಿಗೆ ಒದ್ದೆ ಮಾಡಿಕೊಳ್ಳುತ್ತದೆ ಎಂದು ಹೇಳದಿರಿ. ಇದರಿಂದ ಮಕ್ಕಳು ಖಿನ್ನತೆಯ ಮನೋಭಾವ ಹೊಂದುವ ಸಾಧ್ಯತೆಗಳಿರುತ್ತವೆ.
* ಮಕ್ಕಳಿಗೆ ಮಲಗುವ ಮುನ್ನ ಎರಡು ಬಾರಿ ಮೂತ್ರ ಮಾಡಿಸಿ ನಂತರ ಮಲಗಿಸಿ.
* ಎಲ್ಲಾ ಮುನ್ನೆಚ್ಚರಿಕೆ ವಹಿಸಿದರೂ ಮಗು ಹಾಸಿಗೆ ಒದ್ದೆ ಮಾಡಿಕೊಳ್ಳುತ್ತದೆ ಎಂದಾದರೆ ಮಕ್ಕಳ ತಜ್ಞರನ್ನು ಭೇಟಿ ಮಾಡಬೇಕು.