ಹೆಣ್ಣು ಮಗುವೆಂದರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಹೆಣ್ಣು ಬಾಹ್ಯಾಕಾಶಕ್ಕೆ ಜಿಗಿಯಬಲ್ಲಳು, ಸಾಗರದ ಆಳಕ್ಕೂ ಇಳಿಯಬಲ್ಲಳು. ಮಂಗಳವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗಿದೆ.
ಹೆಣ್ಣು ಮಕ್ಕಳ ಉಳಿವು ಹಾಗೂ ಶ್ರೇಯಸ್ಸಿಗಾಗಿ ದನಿಗೂಡಿಸುವ ದಿನ. ನಗರ ಮಾತ್ರವಲ್ಲದೆ ಹಳ್ಳಿಯ ಹೆಣ್ಣುಮಕ್ಕಳು ಈಗ ಉದ್ಯೋಗ ಅರಸಿ ತಮ್ಮದೇ ಸ್ವಂತ ದುಡಿಮೆ ಹೊಂದುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹೆಣ್ಣುಮಕ್ಕಳ ಈ ನಡೆ ಪ್ರಶಂಸನೀಯವಾದರೂ ಇನ್ನೂ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಸೂಕ್ತ ರಕ್ಷಣೆ ಇಲ್ಲ. ದಿನ ಬೆಳಗಾದರೆ ಹೆಣ್ಣು ಮಕ್ಕಳ ದೌರ್ಜನ್ಯದ ಸುದ್ದಿ ಸರ್ವೇ ಸಾಮಾನ್ಯ.
ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವ ಹಾಗೂ ಗಟ್ಟಿ ನೆಲೆ ಕಂಡುಕೊಳ್ಳಲು ಹಾತೊರೆಯುವ ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗೆ ಒಂದಷ್ಟು ಆತ್ಮರಕ್ಷಣೆಯ ಕಲೆಯನ್ನು ಕಲಿಯುವುದು ಬಹಳ ಸೂಕ್ತ.
ಸಮಯದ ಪರಿವೇ ಇಲ್ಲದೆ ದುಡಿಯುವ ಹೆಣ್ಣು ಮಕ್ಕಳು, ತಡವಾಗಿ ಮನೆ ಸೇರುವುದು ಅನಿವಾರ್ಯವಾದಾಗ ಒಂದಷ್ಟು ಆತ್ಮರಕ್ಷಣೆಯ ಪಟ್ಟುಗಳು ಅವರ ಪಾಲಿಗೆ ವರದಾನಗಬಹುದು.
ಪೋಷಕರೂ ಸಹಾ ಈ ಬಗ್ಗೆ ವಿಶಾಲ ಮನೋಭಾವದಿಂದ ಯೋಚಿಸುವ ಕಾಲವಿದು. ವಾರಾಂತ್ಯದಲ್ಲಿ ಆತ್ಮರಕ್ಷಣೆಯ ಕಲೆಯನ್ನು ಕಲಿಸುವ ಅನೇಕ ಅಲ್ಪಾವಧಿ ತರಗತಿಗಳು ಈಗ ಹೇರಳವಾಗಿ ಲಭ್ಯವಿದೆ. ಇವುಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಿ ನಿಮ್ಮ ಹೆಣ್ಣು ಮಗುವಿನ ಭವಿಷ್ಯವನ್ನು ಜೋಪಾನ ಮಾಡಿ.