ಮಕ್ಕಳು ಸಾಮಾನ್ಯವಾಗಿ ಊಟ ಮಾಡಲು ಒಲ್ಲೆ ಎನ್ನುತ್ತಾರೆ. ಜಂಕ್ ಫುಡ್‌ಗಳನ್ನೇ ಇಷ್ಟಪಡ್ತಾರೆ. ಮಕ್ಕಳಿಗೆ ಸಮತೋಲಿತ ಆಹಾರದ ಅಗತ್ಯವು ಒಂದು ವರ್ಷದಿಂದಲೇ ಪ್ರಾರಂಭವಾಗುತ್ತದೆ. ಸರಿಯಾಗಿ ತಿನ್ನದೇ ಇದ್ದರೆ ಅದರಿಂದ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಉಂಟಾಗಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕಾಲೋಚಿತ ಸೋಂಕುಗಳಿಂದ ರಕ್ಷಿಸಲು, ಮೆದುಳು ಮತ್ತು ದೇಹದ ಸಶಕ್ತತೆಗಾಗಿ ಮಕ್ಕಳು ಉತ್ತಮ ಆಹಾರ ಸೇವಿಸಬೇಕು.
ಜಂಕ್ ಫುಡ್ ತಪ್ಪಿಸಿ…
ಮಕ್ಕಳಿಗೆ ನೀವು ಕೊಡುವ ಆಹಾರದಲ್ಲಿ ಅಗತ್ಯವಾದ ಪೋಷಕಾಂಶಗಳ ಜೊತೆಗೆ ರುಚಿ ಕೂಡ ಇರಬೇಕು. ಮಿಶ್ರ ತರಕಾರಿ ಪರೋಟ, ಟಿಕ್ಕಿ, ಪನೀರ್ ರೋಲ್, ಹಣ್ಣಿನ ಸಿಹಿತಿಂಡಿಗಳು ಮಕ್ಕಳಿಗೆ ಸೂಕ್ತ. ಪೋಷಕರು ತಮ್ಮ ಮಕ್ಕಳಿಗೆ ಆರೋಗ್ಯಕರ ಆಹಾರದ ಅಭಿರುಚಿಯನ್ನು ಬೆಳೆಸುವತ್ತ ಗಮನ ಹರಿಸಬೇಕು. ಜಂಕ್ ಫುಡ್ ಮತ್ತು ಕರಿದ ಆಹಾರಗಳು ಮಕ್ಕಳಿಗೆ ಒಳ್ಳೆಯದಲ್ಲ. ಕೆಲವೊಂದು ಆಹಾರ ಪದಾರ್ಥಗಳು ಮಕ್ಕಳನ್ನು ಅನಾರೋಗ್ಯಕ್ಕೀಡು ಮಾಡುತ್ತವೆ. ಇನ್ನು ಕೆಲವು ಅಲರ್ಜಿಯನ್ನು ಉಂಟುಮಾಡಬಹುದು. ಅವುಗಳಿಂದ ಮಕ್ಕಳನ್ನು ದೂರವಿಡಿ.
ಹಸಿ ಹಾಲು ಮತ್ತು ಮೃದುವಾದ ಚೀಸ್…
ಪಾಶ್ಚರೀಕರಿಸದ ಆಹಾರಗಳು ಅಥವಾ ಪಾನೀಯಗಳು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಇದು ತೀವ್ರವಾದ ಅತಿಸಾರ ಮತ್ತು ಗಂಭೀರ ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗಬಹುದು. ಇದು ನಿಮ್ಮ ಮಗುವಿನ ಕರುಳಿನ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಹಸಿ ಹಾಲು ಮತ್ತು ಮೆದುವಾದ ಪನೀರ್ ಅನ್ನು ಮಗುವಿಗೆ ಕೊಡಬೇಡಿ.
ಕರಿದ ತಿನಿಸುಗಳು…
ಹೆಚ್ಚು ಉಪ್ಪು ತಿನ್ನುವುದು ಮೂತ್ರಪಿಂಡಕ್ಕೆ ಒಳ್ಳೆಯದಲ್ಲ. ಪ್ಯಾಕ್ ಮಾಡಿದ ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪಿನಂಶ ಹೆಚ್ಚಾಗಿರುತ್ತದೆ. ಚಿಪ್ಸ್, ಕ್ರ್ಯಾಕರ್ಸ್, ಸಾಸೇಜ್‌ಗಳು, ಉಪ್ಪಿನಕಾಯಿ ಇವನ್ನೆಲ್ಲ ಮಕ್ಕಳಿಗೆ ಹೆಚ್ಚು ಕೊಡಬೇಡಿ.
ಬಿಸ್ಕತ್ತು, ಕೇಕ್, ಚಾಕೊಲೇಟ್…
ಮಕ್ಕಳಿಗೆ ನಾವು ಕೊಡುವ ಕೆಲವೊಂದು ಆಹಾರಗಳು ಬೊಜ್ಜು, ಮಧುಮೇಹ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಸಕ್ಕರೆ ಸೇರಿಸಿದ ಆಹಾರಗಳು ಮತ್ತು ಪಾನೀಯಗಳು ಹಲ್ಲಿನ ಕೊಳೆಯುವಿಕೆಗೆ ಕಾರಣವಾಗಬಹುದು. ಪ್ಯಾಕ್ ಮಾಡಿರುವ ಜ್ಯೂಸ್, ಮಫಿನ್, ಬಿಸ್ಕತ್, ಕೇಕ್, ಚಾಕೊಲೇಟ್, ತಂಪು ಪಾನೀಯಗಳು, ಹೆಚ್ಚು ಸಿಹಿಯಾದ ಸುವಾಸನೆಯ ಹಾಲು, ಡಬ್ಬಿಯಲ್ಲಿ ತುಂಬಿದ ರಸಗಳು ಮಕ್ಕಳಿಗೆ ಸೂಕ್ತವಲ್ಲ.
ಕೆಫೀನ್…
ಹೆಚ್ಚು ಕೆಫೀನ್ ಹೆಚ್ಚಿದ ಹೃದಯ ಬಡಿತ, ಆತಂಕ ಮತ್ತು ನಿದ್ರೆಯ ಕೊರತೆಗೆ ಕಾರಣವಾಗಬಹುದು. ಇದು ಮಕ್ಕಳಿಗೆ ವಿಷಕಾರಿ ಎಂದು ಸಾಬೀತಾಗುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಮೂಳೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ ಕೆಫೀನ್ ಕೊಡಬೇಡಿ. ಪ್ಯಾಕ್ ಮಾಡಿದ ಆಹಾರ… ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳು ನಿಮ್ಮ ಮಗುವಿಗೆ ಸೂಕ್ತವಲ್ಲ. ಅವು ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಹಾಗಾಗಿ ಬೇಕರಿ ಉತ್ಪನ್ನಗಳು, ಪ್ಯಾಕ್ ಮಾಡಿದ ಆಹಾರಗಳು ಮತ್ತು ಡೀಪ್ ಫ್ರೈ ಮಾಡಿದ ತಿನಿಸುಗಳನ್ನು ಮಕ್ಕಳಿಗೆ ಹೆಚ್ಚು ಕೊಡಬೇಡಿ.
ಹಸಿ ತರಕಾರಿ…
ಕೋಸುಗಡ್ಡೆ, ಕ್ಯಾಪ್ಸಿಕಂ, ಬಟಾಣಿ, ಹೂಕೋಸು, ಬೀನ್ಸ್, ಬೆಂಡೆಕಾಯಿ ಮುಂತಾದ ಹಸಿ ತರಕಾರಿಗಳು ಹೆಚ್ಚಿನ ಮಟ್ಟದ ನೈಟ್ರೇಟ್‌ಗಳನ್ನು ಹೊಂದಿರುತ್ತವೆ. ಹಾಗಾಗಿ ಇವನ್ನು ಬೇಯಿಸದೇ ತಿಂದರೆ ಚಿಕ್ಕ ಮಕ್ಕಳಿಗೆ ಅಪಾಯವನ್ನುಂಟುಮಾಡುತ್ತವೆ. ಅವುಗಳನ್ನು ಚೆನ್ನಾಗಿ ತೊಳೆದು, ಚೆನ್ನಾಗಿ ಬೇಯಿಸಿ ಮಗುವಿಗೆ ನೀಡಿ.
ಒಣದ್ರಾಕ್ಷಿ, ಬಾದಾಮಿ…
ಒಣದ್ರಾಕ್ಷಿ, ಬಾದಾಮಿ ಸೇರಿದಂತೆ ಇತರ ಡ್ರೈಫ್ರೂಟ್‌ಗಳನ್ನು ಚಿಕ್ಕ ಮಗುವಿಗೆ ಕೊಡಬಾರದು. ಅವು ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯವಿರುತ್ತದೆ. 5 ವರ್ಷದವರೆಗೆ ಇವನ್ನೆಲ್ಲ ನಿಮ್ಮ ಮಗುವಿಗೆ ಕೊಡಬೇಡಿ. ಆದಾಗ್ಯೂ ನೀವು ಅವುಗಳನ್ನು ಹಿಸುಕಿ ಅಥವಾ ಪುಡಿ ಮಾಡಿ ಕೊಡಬಹುದು. ಇನ್ನು ಕೆಲವೊಂದು ಪದಾರ್ಥಗಳು ಮಕ್ಕಳಲ್ಲಿ ಅಲರ್ಜಿ ಉಂಟುಮಾಡುತ್ತವೆ.
ಹಾಲು, ಸೀಗಡಿ, ಮೊಟ್ಟೆ, ಕಡಲೆಕಾಯಿ, ಕೆಲವೊಂದು ಬೀಜಗಳು, ಸೋಯಾಬೀನ್, ಮೀನು ಇವುಗಳನ್ನು ತಿನ್ನುವುದರಿಂದ ಅಲರ್ಜಿ ಉಂಟಾಗಬಹುದು. ದದ್ದು, ತುರಿಕೆಯಂತ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ ದಯವಿಟ್ಟು ಮಕ್ಕಳ ವೈದ್ಯರನ್ನು ಸಂಪರ್ಕಿಸಿ.