ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತು ಭಾರೀ ವಿವಾದವೇ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ವಾಹನಗಳ ಹಾರ್ನ್ ಶಬ್ಧ ಕೂಡ ಮಿತಿಮೀರದಂತೆ ಪೊಲೀಸರು ಕಟ್ಟಪ್ಪಣೆ ಮಾಡ್ತಿದ್ದಾರೆ. ಮುಂಬೈ ಪೊಲೀಸರು ಈಗಾಗ್ಲೇ ಕಾರ್ಯಾಚರಣೆಗಿಳಿದಿದ್ದು, ಹಾರ್ನ್ ಸದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ತಿದ್ದಾರೆ.
ಪ್ರಸ್ತುತ ವಾಹನಗಳ ಹಾರ್ನ್ ಶಬ್ದವು 92 ಡೆಸಿಬಲ್‌ಗಳಿಂದ 112 ಡೆಸಿಬಲ್‌ಗಳವರೆಗೆ ಇರುತ್ತದೆ. ಇದು ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಉಲ್ಲಂಘನೆ ಅನ್ನೋದು ಪೊಲೀಸರ ವಾದ.
ಶಬ್ದ ಮಾಲಿನ್ಯ ತಡೆಗೆ ಸಂಬಂಧಪಟ್ಟಂತೆ ವಾಹನ ತಯಾರಕ ಕಂಪನಿಗಳ ಜೊತೆಗೂ ಪೊಲೀಸರು ಈಗಾಗ್ಲೇ ಸಭೆ ನಡೆಸಿದ್ದಾರೆ. ವಾಹನಗಳ ಹಾರ್ನ್ ಸದ್ದನ್ನು ಕಡಿಮೆ ಮಾಡುವಂತೆ ಸೂಚಿಸಿದ್ದಾರೆ. ಮುಂಬೈನ ರಸ್ತೆಗಳಲ್ಲಿ ಜೋರಾಗಿ ಹಾರ್ನ್ ಮಾಡುವ ವಾಹನ ಸವಾರರ ವಿರುದ್ಧ ಈಗಾಗ್ಲೇ ಕ್ರಮ ಕೈಗೊಳ್ಳಲಾಗ್ತಿದೆ. ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯೂ ಕರ್ಕಶ ಶಬ್ಧದ ಹಾರ್ನ್ ಬಾರಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಗರವನ್ನು ಶಬ್ಧ ಮಾಲಿನ್ಯದಿಂದ ಮುಕ್ತಗೊಳಿಸುವ ಉದ್ದೇಶದಿಂದ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ತಿದ್ದಾರೆ. ಇತ್ತೀಚೆಗೆ ಹಲವಾರು ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳನ್ನು ಭೇಟಿ ಮಾಡಿ ಕಟ್ಟಡ ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವಂತೆ ಸೂಚಿಸಿದ್ದರು.