ಮನೆಯಲ್ಲಿ ಸಾಕುಪ್ರಾಣಿಗಳೊಂದಿಗೆ ವಾಸಿಸುವುದು ನಿಜಕ್ಕೂ ಆಹ್ಲಾದಕರ ಅನುಭವ. ಕಚೇರಿಯಿಂದ ಹಿಂತಿರುಗುತ್ತಿದ್ದಂತೆ ಬಾಲ ಅಲ್ಲಾಡಿಸುತ್ತ, ಮೈಮೇಲೆ ಜಿಗಿದು ಪ್ರೀತಿಯಿಂದ ಮಾತನಾಡಿಸುವ ನಾಯಿ, ಬೆಕ್ಕುಗಳು ನಮ್ಮ ಇಡೀ ದಿನದ ಆಯಾಸವನ್ನು ದೂರ ಮಾಡುತ್ತದೆ. ಅವುಗಳ ಮುಗ್ಧ ಕಣ್ಣುಗಳು ನಮ್ಮ ಹೃದಯವನ್ನು ಆಕರ್ಷಿಸುತ್ತವೆ. ಆದರೆ ಸಾಕುಪ್ರಾಣಿಗಳ ಜೊತೆಗಿನ ಕೆಲವೊಂದು ಅಭ್ಯಾಸಗಳು ಹಾನಿಕಾರಕವಾಗಬಹುದು.
ಸಾಕುಪ್ರಾಣಿಗಳ ಜೊತೆಗಿನ ಆಟ, ತುಂಟಾಟ ಎಲ್ಲವೂ ನೋಡಲು ಚೆನ್ನ. ಆದರೆ ತಜ್ಞರ ಪ್ರಕಾರ, ಸಾಕುಪ್ರಾಣಿಗಳ ಲಾಲಾರಸದಲ್ಲಿರುವ ಬ್ಯಾಕ್ಟೀರಿಯಾಗಳು ಚರ್ಮದ ಸೋಂಕುಗಳು, ಕಿರಿಕಿರಿ ಮತ್ತು ಅಲರ್ಜಿಯನ್ನು ಉಂಟುಮಾಡಬಹುದು. ಇದರ ಜೊತೆಗೆ, ಸಾಕುಪ್ರಾಣಿಗಳ ತುಪ್ಪಳವು ಅನೇಕ ಬ್ಯಾಕ್ಟೀರಿಯಾಗಳು, ಡರ್ಮಟೊಫೈಟ್ಗಳು, ಹುಳಗಳು, ಉಣ್ಣಿ ಮತ್ತು ಚಿಗಟಗಳನ್ನು ಹೊಂದಿರುತ್ತದೆ.
ಇದು ಮಾನವರಲ್ಲಿ ವಿವಿಧ ಚರ್ಮದ ಸೋಂಕುಗಳು, ರೋಗನಿರೋಧಕ ಕಾಯಿಲೆಗಳು ಮತ್ತು ಡರ್ಮಟೈಟಿಸ್ಗೆ ಕಾರಣವಾಗಬಹುದು. ಈ ಬ್ಯಾಕ್ಟೀರಿಯಾಗಳು ನಮಗೆ ಹಾನಿಕಾರಕ. ಅದೇ ರೀತಿ ಪೆಟ್ಸ್ ಕೂಡ ಮಾಲೀಕರ ಬೆವರು ಮತ್ತು ಸೌಂದರ್ಯವರ್ಧಕಗಳನ್ನು ನೆಕ್ಕುತ್ತವೆ. ಸಾಕುಪ್ರಾಣಿಗಳು ನಮ್ಮ ಮುಖ ಅಥವಾ ತುಟಿಗಳನ್ನು ನೆಕ್ಕಲು ಬಿಡಬಾರದು. ನಾವು ಬಳಸುವ ಸೌಂದರ್ಯವರ್ಧಕಗಳು ಸಾಕುಪ್ರಾಣಿಗಳಲ್ಲಿ ಸೋಂಕು ಉಂಟುಮಾಡುತ್ತವೆ. ಅವು ಪೆಟ್ಸ್ಗೆ ವಿಷಕಾರಿಯಾಗಬಹುದು.
ಅಲ್ಲದೆ ಸಾಕುಪ್ರಾಣಿಗಳು ಹಲ್ಲಿನ ಸಮಸ್ಯೆಗಳನ್ನು ಹೊಂದಿದ್ದರೆ ಆ ಬ್ಯಾಕ್ಟೀರಿಯಾವನ್ನು ಮನುಷ್ಯರಿಗೆ ವರ್ಗಾಯಿಸಬಹುದು. ಇದು ಸೋಂಕಿಗೆ ಕಾರಣವಾಗಬಹುದು. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಸಾಕು ಪ್ರಾಣಿಗಳನ್ನು ನಿಮ್ಮ ಹಾಸಿಗೆಯಲ್ಲೇ ಮಲಗಿಸಿಕೊಳ್ಳುವ ಅಭ್ಯಾಸವನ್ನು ಬಿಡಿ. ಬೆಡ್ ಶೀಟ್ಗಳನ್ನು ಆಗಾಗ ತೊಳೆಯಿರಿ.
ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ಸಾಕುಪ್ರಾಣಿಗಳ ವಾಸನೆಯನ್ನು ತೊಡೆದುಹಾಕಲು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ. ಉತ್ತಮ ಎಂಟಿಬ್ಯಾಕ್ಟೀರಿಯಲ್ ಫೇಸ್ ವಾಶ್ ಬಳಸಿ. ನಿಯಮಿತ ದಂತ ತಪಾಸಣೆ, ವ್ಯಾಕ್ಸಿನೇಷನ್, ಜಂತುಹುಳು ನಿವಾರಣೆ ಇವೆಲ್ಲವನ್ನೂ ಮಾಡುವುದು ಅತ್ಯಗತ್ಯ. ಕೊಳಕು ಮತ್ತು ಬ್ಯಾಕ್ಟೀರಿಯಾ ವರ್ಗಾವಣೆಯಾಗದಂತೆ ತಡೆಯಲು ಸಾಕುಪ್ರಾಣಿಗಳ ಪೋಷಕರು ಪ್ರತಿ ಬಾರಿ ಅವುಗಳ ವಾಕಿಂಗ್ ಬಳಿಕ ಕಾಲು ಮತ್ತು ದೇಹವನ್ನು ಸ್ವಚ್ಛಗೊಳಿಸಬೇಕು.