ಇದೆಂಥಾ ಪ್ರಶ್ನೆ ನಮ್ಮ ಜತೆ ಎಂಥ ಮಾತನಾಡುವುದು ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದಕ್ಕೆ ಕೆಲವೊಮ್ಮೆ ನಮ್ಮ ಜತೆ ನಾವು ಮಾತನಾಡಿಕೊಳ್ಳಬೇಕಾಗುತ್ತದೆ.
ಇಡೀ ದಿನ ಗಂಡ/ಹೆಂಡತಿ, ಮಕ್ಕಳು, ಅವರು, ಇವರು ಎಂದು ಯೋಚನೆ ಮಾಡುತ್ತಾ ಇರುತ್ತೇವೆ. ಇವುರುಗಳೆಲ್ಲರ ಮಧ್ಯೆ ನಮ್ಮನ್ನು ನಾವು ಮರೆತು ಬಿಡುತ್ತೇವೆ. ಕೆಲವೊಮ್ಮೆ ಮನಸ್ಸು ಇವತ್ತು ಏನೂ ಕೂಡ ಮಾಡುವುದಕ್ಕೆ ಆಗಲ್ಲ ಎಂದು ರಚ್ಚೆ ಹಿಡಿದು ಕುಳಿತು ಬಿಡುತ್ತದೆ. ಆಗ ನಿಮ್ಮನ್ನು ನೀವೇ ತುಸು ಸಮಾಧಾನ ಮಾಡಿಕೊಳ್ಳುವುದನ್ನು ಕಲಿಯಬೇಕು.
ಇನ್ನು ಎಲ್ಲರಿಗೂ ಸಮಯ ಕೊಡುವ ನೀವು ನಿಮಗೂ ಸಮಯ ಕೊಡಬೇಕು. ನಿಮಗೆ ಏನು ಇಷ್ಟ ಎಂಬುದು ಕೂಡ ನಿಮಗೆ ಗೊತ್ತಿರಬೇಕು. ಮನೆಯಲ್ಲಿ ಎಲ್ಲರಿಗೂ ಚಟ್ನಿ ಇಷ್ಟ ಎಂದು ಚಟ್ನಿ ಮಾಡುವಾಗ ನಿಮಗೆ ಸಾಂಬಾರು ಇಷ್ಟವಾಗಿದ್ದರೆ ಅದನ್ನು ಮಿಸ್ ಮಾಡದೇ ಮಾಡಿಕೊಳ್ಳಿ. ಇದೊಂದು ಸಣ್ಣ ವಿಷಯವಾಗಿರಬಹುದು. ಆದರೆ ಇದೇ ಸಣ್ಣ ಸಣ್ಣ ವಿಷಯಗಳು ದೊಡ್ಡದಾಗಿ ಒತ್ತಡವನ್ನು ತರುತ್ತದೆ.
ಹಾಗಾಗಿ ನಿಮ್ಮ ಮನಸ್ಸು ಮಹತ್ವವಾದದ್ದು, ನೀವು ಮಾನಸಿಕವಾಗಿ ಖುಷಿಯಾಗಿದ್ದರೆ ಮನೆಯವರು ಕೂಡ ಖುಷಿಯಾಗಿರುತ್ತಾರೆ ಎಂಬುದನ್ನು ಅರಿತುಕೊಳ್ಳಿ.