ವರ್ಷಗಳು ಕಳೆದರೂ ತಮ್ಮ ಕಾರು ಹೊಸದರಂತೆಯೇ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ವಾರಕ್ಕೊಮ್ಮೆಯಾದ್ರೂ ಕಾರನ್ನು ಉಜ್ಜಿ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ನೀವು ಕಾರಿನ ಹೊರ ಭಾಗವನ್ನು ಮಾತ್ರ ಫಳ ಫಳ ಹೊಳೆಯುವಂತೆ ಸ್ವಚ್ಛ ಮಾಡಿದ್ರೆ ಸಾಲದು. ಕಾರಿನ ಒಳ ಭಾಗವನ್ನು ಸ್ವಚ್ಛಗೊಳಿಸದಿದ್ದರೆ ಕೆಟ್ಟ ವಾಸನೆ ಬರುವ ಸಾಧ್ಯತೆಯಿರುತ್ತದೆ.
ಕಾರು ದುರ್ವಾಸನೆ ಬೀರಲು ಪ್ರಾರಂಭಿಸಿದರೆ ಕುಳಿತು ಪ್ರಯಾಣ ಮಾಡುವುದು ಕಷ್ಟ. ವಾಹನದಲ್ಲಿ ಹೊಟ್ಟೆ ತೊಳೆಸುವ ಸಮಸ್ಯೆ ಇರುವವರಿಗಂತೂ ವಾಸನೆಯಿಂದ ಮತ್ತಷ್ಟು ಕಷ್ಟವಾಗುತ್ತದೆ. ಕಾರು ಸುವಾಸನೆಭರಿತವಾಗಿದ್ದರೆ ದೀರ್ಘ ಪ್ರಯಾಣ ಮಾಡುವುದು ಸುಲಭವಾಗುತ್ತದೆ. ಕಾರಿನೊಳಗಿನ ದುರ್ವಾಸನೆಯನ್ನು ಹೋಗಲಾಡಿಸುವುದು ಹೇಗೆ ಅನ್ನೋದನ್ನು ನೋಡೋಣ.
ವಾಸನೆಯ ಕಾರಣ ಪತ್ತೆ ಮಾಡಿ
ಮೊದಲನೆಯದಾಗಿ ನಿಮ್ಮ ಕಾರಿನಲ್ಲಿ ಕೆಟ್ಟ ವಾಸನೆ ಬರಲು ಕಾರಣವೇನು ಎಂಬುದನ್ನು ನೀವು ಕಂಡುಹಿಡಿಯಬೇಕು. ಸಿಗರೇಟು ಇತ್ಯಾದಿಗಳ ವಾಸನೆಯೋ ಅಥವಾ ಯಾವುದೋ ಕಸದ ಕಾರಣದಿಂದ ಕಾರು ವಾಸನೆ ಬರುತ್ತಿದೆಯೋ ಎಂಬುದನ್ನು ಪರಿಶೀಲಿಸಿ. ನೀವು ನಿಯಮಿತವಾಗಿ ಕಾರಿನಲ್ಲಿ ಸಿಗರೇಟ್ ಸೇದುತ್ತಿದ್ದರೆ ಅದರಿಂದಲೂ ದುರ್ನಾತ ಬರುತ್ತಿರುತ್ತದೆ. ಹಾಗಾಗಿ ಕಾರಿನೊಳಗೆ ಧೂಮಪಾನ ಮಾಡಬೇಡಿ. ಕಾರಿನಲ್ಲಿ ಕಸವೇನಾದರೂ ಇದ್ದರೆ ಕೂಡಲೇ ಅದನ್ನು ತೆಗೆದುಹಾಕಿ.
ಕಾರಿನ ಸ್ವಚ್ಛತೆ
ಅನೇಕ ಬಾರಿ ನಾವು ತಿನ್ನುವಾಗ ಕೆಳಕ್ಕೆ ಉದುರಿದ ಆಹಾರ ಪದಾರ್ಥಗಳು ಕಾರಿನಲ್ಲಿರುತ್ತವೆ. ಅವುಗಳಿಂದಲೂ ಕಾರಿನೊಳಗೆ ವಾಸನೆ ಬರಲಾರಂಭಿಸುತ್ತದೆ. ಹಾಗಾಗಿ ಇಡೀ ಕ್ಯಾಬಿನ್ ಅನ್ನು ಒಮ್ಮೆ ಪರಿಶೀಲಿಸಿ ಮತ್ತು ಯಾವುದೇ ಆಹಾರ ಪದಾರ್ಥ ಬಿದ್ದಿದ್ದರೆ ಅದನ್ನು ಕ್ಲೀನ್ ಮಾಡಿ. ನೀವು ಯಾವುದೇ ರೀತಿಯ ಕಾರ್ ಕ್ಲೀನರ್ ಅನ್ನು ಬಳಸಬಹುದು. ವ್ಯಾಕ್ಯೂಮ್ ಕ್ಲೀನರ್ ಧೂಳು ಹೊಡೆಯಲು ಅತ್ಯುತ್ತಮ.
ಫ್ಲೋರ್ ಮ್ಯಾಟ್ ಬಳಸಿ
ಕಾರಿನೊಳಗೆ ನಮ್ಮ ಚಪ್ಪಲಿಗೆ ಅಂಟಿಕೊಂಡ ಮಣ್ಣು ಬೀಳುತ್ತದೆ. ಇದರಿಂದಲೂ ಕಾರು ಕೊಳಕಾಗಿ ಧೂಳಿನ ವಾಸನೆ ಆವರಿಸಿಕೊಳ್ಳುತ್ತದೆ. ಹಾಗಾಗಿ ಕಾರಿನೊಳಗೆ ಫ್ಲೋರ್ ಮ್ಯಾಟ್‌ಗಳನ್ನು ಹಾಕಿ. ಆಗಾಗ ಅವುಗಳನ್ನು ಝಾಡಿಸಿ ಅಥವಾ ತೊಳೆದು ಸ್ವಚ್ಛ ಮಾಡುತ್ತಿರಿ.
ಏರ್ ಫ್ರೆಶನರ್ ಬಳಸಿ
ಕಾರನ್ನು ಚೆನ್ನಾಗಿ ಶುಚಿಗೊಳಿಸಿದ ನಂತರ ಏರ್ ಫ್ರೆಶ್‌ನರ್ ಬಳಸುವುದು ಉತ್ತಮ. ಕಾರಿನಲ್ಲಿ ಸುವಾಸನೆ ಬೀರುವ ಅನೇಕ ಕಾರ್ ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗೆಯೇ ನೀವು ಎಸಿ ವೆಂಟ್‌ಗಳಲ್ಲಿ ಅನ್ವಯಿಸಲು ಏರ್ ಫ್ರೆಶ್‌ನರ್‌ಗಳನ್ನು ಖರೀದಿಸಬಹುದು.