ಭಾರತೀಯರಿಗೆ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಹೊಸ ಸಿಮ್ ಕಾರ್ಡ್ ಪಡೆಯಲು, ಬ್ಯಾಂಕ್ ಖಾತೆಯನ್ನು ತೆರೆಯಲು, ಪ್ಯಾನ್ ಕಾರ್ಡ್ ಬಳಸಲು ಅಥವಾ ಯಾವುದೇ ಸರ್ಕಾರದ ಯೋಜನೆಯ ಲಾಭ ಪಡೆಯಲು ಆಧಾರ್ ಅಗತ್ಯವಿದೆ. ಆಧಾರ್‌ನಿಂದ ಜನರಿಗೆ ಹಾಗೂ ಸರ್ಕಾರಕ್ಕೆ ಕೆಲಸ ಸುಲಭವಾಗಿದೆ. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಗಡುವು ಈಗಾಗ್ಲೇ ಮುಗಿದಿದೆ. ಈಗ ಮತ್ತೊಂದು ದಾಖಲೆಯನ್ನು ಆಧಾರ್ ಜೊತೆ ಲಿಂಕ್ ಮಾಡುವ ಅಗತ್ಯ ಬರಬಹುದು. ಆಸ್ತಿ ದಾಖಲೆಗಳನ್ನು ಆಧಾರ್‌ಗೆ ಲಿಂಕ್ ಮಾಡಬೇಕು ಎಂಬ ಬೇಡಿಕೆಯಿದೆ.
ಇದರಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ಬೇನಾಮಿ ಆಸ್ತಿ ವಹಿವಾಟು ನಿಲ್ಲುತ್ತದೆ. ಈ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವಿಚಾರದಲ್ಲಿ ಸರ್ಕಾರದಿಂದ ಉತ್ತರ ಕೇಳಿದೆ. ವಕೀಲ ಅಶ್ವಿನಿ ಉಪಾಧ್ಯಾಯ ಅವರು ದೆಹಲಿ ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ. ಭ್ರಷ್ಟಾಚಾರ, ಕಪ್ಪುಹಣ ಮತ್ತು ಬೇನಾಮಿ ಆಸ್ತಿ ವಿರುದ್ಧ ಕಠಿಣ ಕ್ರಮಗಳು ಅಗತ್ಯ ಎಂದು ವಾದಿಸಿದ್ದಾರೆ.
ಆಸ್ತಿ ದಾಖಲೆಗಳನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಅಂತಹ ಪ್ರಕರಣಗಳನ್ನು ಸುಲಭವಾಗಿ ಹಿಡಿಯಬಹುದು ಅನ್ನೋದು ಇವರ ಅಭಿಪ್ರಾಯ. ನಾಗರಿಕರ ಆಸ್ತಿ ದಾಖಲೆಗಳನ್ನು ಅವರ ಆಧಾರ್ ಸಂಖ್ಯೆಗಳೊಂದಿಗೆ ಜೋಡಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ. ಭ್ರಷ್ಟಾಚಾರ, ಕಪ್ಪುಹಣ ಮತ್ತು ಬೇನಾಮಿ ವಹಿವಾಟು ತಡೆಗೆ ಸಂಬಂಧಿಸಿದ ಅರ್ಜಿಗೆ ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ 4 ವಾರಗಳ ಕಾಲಾವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಪೀಠವು ಹಣಕಾಸು, ಕಾನೂನು, ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಈ ವಿಷಯದ ಕುರಿತು ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ಸೆಪ್ಟೆಂಬರ್ 5 ರಂದು ನಡೆಯಲಿದೆ.