ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇಲ್ಲಿ ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಅವುಗಳನ್ನು ನಾವು ಹೇಗೆಲ್ಲಾ ಬಳಸಬಹುದು ಎಂಬುದರ ಕುರಿತು ಒಂದಷ್ಟು ಟಿಪ್ಸ್ ಇದೆ ನೋಡಿ.
ಪಾತ್ರೆ ತೊಳೆಯುವುದಕ್ಕೆಂದು ಸ್ಕ್ರಬ್ ತೆಗೆದುಕೊಂಡು ಬಂದಿರುತ್ತಿರಿ. ಎಲ್ಲಾ ಪಾತ್ರೆ ತೊಳೆದು, ಸ್ಕ್ರಬ್ ತೊಳೆದು ಇಟ್ಟರೂ ಬೆಳಿಗ್ಗೆ ಎದ್ದು ಅಡುಗೆ ಮನೆಗೆ ಬಂದಾಗ ಅದರಿಂದ ಒಂದು ರೀತಿಯ ಕೆಟ್ಟ ವಾಸನೆ ಬರುತ್ತಿರುತ್ತದೆ. ಅದನ್ನು ಸುಲಭದಲ್ಲಿ ನಿವಾರಿಸಿಕೊಳ್ಳಲು ಹೀಗೆ ಮಾಡಿ.
ಬ್ರಷ್ ಅನ್ನು ಒಂದು ಬೌಲ್ ನ ಒಳಗೆ ಹಾಕಿ ಅದರ ಮೇಲೆ 1 ಚಮಚ ಅಡುಗೆ ಸೋಡಾ ಹಾಕಿ ಅದರ ಮೇಲೆ 1 ಕಪ್ ಬಿಸಿ ನೀರು ಸುರಿದು ರಾತ್ರಿಯಿಡಿ ಇಟ್ಟುಬಿಡಿ. ಬೆಳಿಗ್ಗೆ ಎದ್ದು ಒಂದು ಸಲ ತೊಳೆದು ಬಿಡಿ. ಕೊಳೆಯೆಲ್ಲಾ ಬಿಡುತ್ತದೆ.
ಇನ್ನು ಮಿಕ್ಸಿ ಜಾರಿನ ಬ್ಲೇಡ್ ಸುತ್ತ ಒಂದು ರೀತಿಯ ಕಂದು ಬಣ್ಣ ಬಂದಿರುತ್ತದೆ. ಇದನ್ನು ಎಷ್ಟೇ ಬ್ರಷ್ ಹಾಕಿ ತೊಳೆದರು ಕ್ಲೀನ್ ಆಗವುದಿಲ್ಲ. ಇದಕ್ಕೆ ಸುಲಭ ಪರಿಹಾರವೆಂದರೆ 1 ಮೊಟ್ಟೆ ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ 4 ಸುತ್ತು ತಿರುಗಿಸಿ.
ಇದರಿಂದ ಮಿಕ್ಸಿ ಬ್ಲೇಡಿನ ಬಳಿ ಇರುವ ಕಂದು ಬಣ್ಣ ಹೋಗುತ್ತದೆ. ಹೀಗೆ ಪುಡಿ ಮಾಡಿದ ಸಿಪ್ಪೆಯನ್ನು ಬಿಸಾಡುವ ಮೊದಲು 1 ಹನಿ ನೀರನ್ನು ನಿಮ್ಮ ಕೈ ಉಗುರಿನ ಮೇಲೆ ಹಾಕಿಕೊಂಡು ಅದಕ್ಕೆ ಈ ಮೊಟ್ಟೆ ಸಿಪ್ಪೆಯ ಪೌಡರ್ ಹಾಕಿ ನಿಧಾನಕ್ಕೆ ತಿಕ್ಕುವುದರಿಂದ ಕೈ ಉಗುರು ಕ್ಲೀನ್ ಆಗುತ್ತದೆ.