ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ.
ಒಂಟಿತನ ಭಾವನಾತ್ಮಕ ಅಸುರಕ್ಷತೆಯ ಮೊದಲ ಲಕ್ಷಣ. ಜೊತೆಗೆ ಯಾವ ವ್ಯಕ್ತಿಯಿದ್ರೂ ಎಷ್ಟು ಸಂತೋಷ ಮುಂದಿದ್ರೂ ಒಂಟಿತನ ಕಾಡಿದ್ರೆ ಆ ವ್ಯಕ್ತಿ ಭಾವನಾತ್ಮಕ ಅಸುರಕ್ಷತೆಗೊಳಗಾಗಿದ್ದಾನೆ ಎಂದೇ ಅರ್ಥ.
ಕಾರಣವಿಲ್ಲದೆ ಮುನಿಸು, ಸಿಟ್ಟು ಕಾಡಿದ್ರೆ ಕೂಡ ಇದು ಭಾವನಾತ್ಮಕ ಅಸುರಕ್ಷತೆಯ ಲಕ್ಷಣ. ಸಾಮಾನ್ಯವಾಗಿ ಸಂಗಾತಿಯನ್ನು ಅತಿಯಾಗಿ ಹಚ್ಚಿಕೊಂಡವರಿಗೆ ಏಕಾಏಕಿ ಅವರನ್ನು ಕಳೆದುಕೊಳ್ಳುವ ಭಯ ಕಾಡಲು ಶುರುವಾಗುತ್ತದೆ. ಇದ್ರಿಂದ ಹೊರ ಬರಲು ಅವರು ಚಿತ್ರವಿಚಿತ್ರವಾಗಿ ವರ್ತಿಸುತ್ತಾರೆ. ಸಂಗಾತಿ ಜೊತೆ ಜಗಳಕ್ಕಿಳಿಯುತ್ತಾರೆ.
ಅನೇಕ ವಿಷ್ಯಗಳಿಗೆ ಸಂಗಾತಿಯಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲವೆಂದ್ರೆ ಇದು ಕೂಡ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.
ಭಾವನಾತ್ಮಕ ಅಸುರಕ್ಷತೆ ಹೆಚ್ಚಾದಂತೆ ವ್ಯಕ್ತಿ ತನ್ನ ಹಾಗೂ ತನ್ನ ಸಂಗಾತಿಯ ಯಾವುದೇ ವಿಷ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡುವುದಿಲ್ಲ. ಸದಾ ಒತ್ತಡಕ್ಕೊಳಗಾಗ್ತಾನೆ.
ಸಂಗಾತಿ ಮಾತಿಗೆ ಬೆಲೆ ಕೊಡದೆ ಸಣ್ಣ ಸಣ್ಣ ವಿಷ್ಯಕ್ಕೂ ಉದ್ವೇಗಕ್ಕೊಳಗಾಗಿ ಅಳಲು ಶುರು ಮಾಡುತ್ತಾನೆ. ಇದೆಲ್ಲ ಭಾವನಾತ್ಮಕ ಅಸುರಕ್ಷತೆಯ ಲಕ್ಷಣಗಳಾಗಿವೆ. ಇದ್ರಿಂದ ಹೊರ ಬರುವುದು ಸುಲಭದ ಮಾತಲ್ಲ. ಆರಂಭದಲ್ಲಿಯೇ ಇದ್ರಿಂದ ಹೊರ ಬಂದಲ್ಲಿ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯ.