ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ಈಗ ಭಾರತಕ್ಕೂ ವಕ್ಕರಿಸಿದೆ. ಡಿಸೆಂಬರ್ 2ರಂದು ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ಮೊಟ್ಟ ಮೊದಲ ಬಾರಿಗೆ ವರದಿಯಾಗಿದ್ದು, ಇದೀಗ ದೇಶದ ವಿವಿಧ ಭಾಗಗಳಲ್ಲಿ ಸಹ ಸೋಂಕು ಪತ್ತೆಯಾಗುತ್ತಿದೆ. ಭಾನುವಾರದ ವೇಳೆಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯಂತೆ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿನಿಂದ ವಿಶ್ವದ ಯಾವುದೇ ದೇಶದಲ್ಲಿ ಈವರೆಗೆ ಸಾವು ಸಂಭವಿಸಿದ ವರದಿಗಳು ಇಲ್ಲ ಎಂದು ಹೇಳಲಾಗಿದೆ. ಸೋಂಕಿಗೊಳಗಾದ ಎಲ್ಲರೂ ಸಹ ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದ್ದಾರೆನ್ನಲಾಗಿದ್ದು, ಆದಾಗ್ಯೂ ಯಾವುದೇ ನಿರ್ಲಕ್ಷ ಬೇಡ ಎಂದು ಎಚ್ಚರಿಸಲಾಗಿದೆ. ಒಮಿಕ್ರಾನ್ ಹರಡುವ ವೇಗ ಡೆಲ್ಟಾ ವೈರಸ್ ಗಿಂತ ದುಪ್ಪಟ್ಟು ಎನ್ನಲಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಒಮಿಕ್ರಾನ್ ಸೋಂಕಿಗೆ ತುತ್ತಾದವರಿಗೆ ಇದುವರೆಗೂ ಕಂಡು ಬಂದಿರುವುದಕ್ಕಿಂತ ವಿಭಿನ್ನ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಆರಂಭದಲ್ಲಿ ಸಣ್ಣ ಜ್ವರ ಕಾಣಿಸಿಕೊಂಡು ಬಳಿಕ ಏಕಾಏಕಿ ಗಂಟಲು ನೋವು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ನಂತರ ಗಂಟಲಿನಲ್ಲಿ ಸೋಂಕು ಹೆಚ್ಚಳವಾಗಲಿದ್ದು, ವಿಪರೀತ ಸುಸ್ತು, ದೇಹದಲ್ಲಿ ನಿಶ್ಯಕ್ತಿ ಹಾಗೂ ಹಾಗೂ ಯಾವುದೇ ಕೆಲಸ ಮಾಡಲು ಸಹ ಅತ್ಯಂತ ತ್ರಾಸದಾಯಕವಾಗುತ್ತದೆ ಎನ್ನಲಾಗಿದೆ. ವಿಪರೀತ ಮೈಕೈ ನೋವು, ಗಂಟಲು ಕೆರೆತ ಒಮಿಕ್ರಾನ್ ಸೋಂಕಿನ ಇತರೆ ಲಕ್ಷಣಗಳಾಗಿವೆ.