ನಿಧಾನವೇ ಪ್ರಧಾನ ಅನ್ನೋ ಮಾತೇ ಇದೆ. ಊಟ ತಿಂಡಿ ತಿನ್ನುವಾಗ್ಲೂ ಈ ಮಾತನ್ನು ನೆನಪಿಸಿಕೊಳ್ಳಬೇಕು. ಯಾಕಂದ್ರೆ ಕೆಲವರಿಗೆ ಗಬಗಬನೆ ಬೇಗ ಬೇಗ ಊಟ ಮಾಡುವ ಅಭ್ಯಾಸವಿರುತ್ತದೆ. ಈ ರೀತಿ ಆತುರಾತುರವಾಗಿ ತಿನ್ನೋದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ವೇಗವಾಗಿ ತಿನ್ನುವುದರಿಂದ ನೀವು ಅತಿಯಾಗಿ ಊಟ ಮಾಡೋ ಸಾಧ್ಯತೆ ಇರುತ್ತದೆ. ನಾವು ಬೇಗನೆ ತಿನ್ನುವಾಗ ಎಷ್ಟು ಪ್ರಮಾಣದಲ್ಲಿ ತಿನ್ನುತ್ತಿದ್ದೇವೆಂಬ ಕಲ್ಪನೆಯಿರುವುದಿಲ್ಲ. ಇದರಿಂದ ತೂಕ ಹೆಚ್ಚಬಹುದು. ಅವಸರದಲ್ಲಿ ತಿಂದರೆ ದೇಹಕ್ಕೆ ಪೋಷಕಾಂಶಗಳೂ ಸಿಗುವುದಿಲ್ಲ.
ನೀವು ಅವಸರದಲ್ಲಿ ಆಹಾರ ಸೇವಿಸಿದರೆ ನಿಮ್ಮ ಮೆದುಳಿಗೆ ಸರಿಯಾದ ಸಂದೇಶ ತಲುಪುವುದಿಲ್ಲ. ನಿಮಗೆ ಹಸಿವಾಗಿದೆಯೇ ಅಥವಾ ಹೊಟ್ಟೆ ತುಂಬಿದೆಯೇ ಎಂಬುದು ಗೊತ್ತಾಗದೇ ಇರಬಹುದು. ಊಟವನ್ನು ನಿಧಾನವಾಗಿ ಅಗಿದು ತಿನ್ನಬೇಕು. ಹಾಗೆ ಮಾಡಿದರೆ ಮಾತ್ರ ದೇಹಕ್ಕೆ ಪೋಷಕಾಂಶಗಳು ಸಿಗುತ್ತವೆ.
ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಬೊಜ್ಜು ಬರಬಹುದು ಎಂಬ ಭಯವಿರುವುದಿಲ್ಲ. ಬೇಗ ಬೇಗ ತಿನ್ನಬೇಕೆಂಬ ಹವಣಿಕೆಯಲ್ಲಿ ದೊಡ್ಡ ದೊಡ್ಡ ತುತ್ತನ್ನು ಬಾಯಿಗಿಟ್ಟುಕೊಳ್ಳುತ್ತೇವೆ. ಅಗಿಯದೇ ನುಂಗಿಬಿಡುತ್ತೇವೆ. ಇದು ಒಳ್ಳೆಯದಲ್ಲ. ಊಟ ಮಾಡುವಾಗ ನೀರು ಕುಡಿಯುತ್ತ ನುಂಗಬೇಡಿ. ಮೊದಲೇ ಸ್ವಲ್ಪ ನೀರು ಕುಡಿದು ನಂತರ ಊಟ ಆರಂಭಿಸಿ.
ಆತುರಾತುರವಾಗಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹಠಾತ್ ಹೆಚ್ಚಳವಾಗುತ್ತದೆ. ಇದರಿಂದ ಇನ್ಸುಲಿನ್ ಪ್ರತಿರೋಧದ ಸಮಸ್ಯೆ ಹೆಚ್ಚಾಗಬಹುದು. ಮಧುಮೇಹ ಕಾಯಿಲೆ ನಿಮ್ಮನ್ನು ಆವರಿಸಿಕೊಳ್ಳುವ ಅಪಾಯವೂ ಇರುತ್ತದೆ.