ಭಾರತದಲ್ಲಿ ಅಕ್ಕಿಯ ಬಳಕೆ ಹೆಚ್ಚು. ಅದರಲ್ಲೂ ದಕ್ಷಿಣ ಭಾರತೀಯರಿಗೆ ಅನ್ನ ತಿನ್ನದೇ ಒಂದು ದಿನವೂ ಇರಲಾಗದು. ಆದರೆ ಇತ್ತೀಚೆಗೆ ಬಿಳಿ ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ, ಪಾಲಿಶ್ ಮಾಡಿದ ಅಕ್ಕಿ ತಿನ್ನುವುದರಿಂದ ಸಮಸ್ಯೆ ಉಂಟಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕಾಗಿ ಬಿಳಿ ಅಕ್ಕಿಗೆ ಪರ್ಯಾಯವಾಗಿ ಕೆಂಪು ಅಕ್ಕಿ, ಕುಸುಬಲಕ್ಕಿ ಬಳಕೆಯ ಕಡೆ ಆಸಕ್ತಿ ತೋರುತ್ತಿದ್ದಾರೆ. ಇದೇ ರೀತಿಯಲ್ಲಿ ಹೆಚ್ಚು ಪರಿಚಯವಿಲ್ಲದ ಅಕ್ಕಿಯ ಮತ್ತೊಂದು ತಳಿ ಇದೆ. ಇದೇ ಕಪ್ಪಕ್ಕಿ.
ಕಪ್ಪಕ್ಕಿಯಲ್ಲಿ ಸಾಕಷ್ಟು ವಿಶೇಷತೆ ಇದೆ. ಇದು ನೋಡಲು ಕಪ್ಪಷ್ಟೇ. ಆದರೆ ಬಂಗಾರದಂತಹ ಆರೋಗ್ಯಕ್ಕಾಗಿ ಇದರ ಬಳಕೆ ಅವಶ್ಯವಿದೆ. ಕಪ್ಪಕ್ಕಿಯಲ್ಲಿ ಫೈಬರ್ ಅಂದರೆ ನಾರಿನಂಶ, ಕಬ್ಬಿಣಾಂಶ ಹಾಗೂ ಪ್ರೊಟೀನ್ ಹೇರಳವಾಗಿದೆ. ಇತರೆ ಯಾವುದೇ ಅಕ್ಕಿಯ ಸೇವನೆಗಿಂತ ಮೂರು ಪಟ್ಟು ಉತ್ತಮ ಅಂಶಗಳನ್ನು ಕಪ್ಪಕ್ಕಿ ಕೊಡುತ್ತದೆ. ತಮ್ಮ ಪ್ರತಿನಿತ್ಯದ ಆಹಾರದಲ್ಲಿ ಕಡ್ಡಾಯವಾಗಿ 1 ಕಪ್ ಕಪ್ಪಕ್ಕಿ ತೆಗೆದುಕೊಳ್ಳುವುದರಿಂದ ಮಧುಮೇಹಿಗಳಿಗೆ ಆಹಾರವೇ ಔಷಧಿಯಂತೆ ಕೆಲಸ ಮಾಡುತ್ತದೆ.
ಇದು ನಿಧಾನವಾಗಿ ಜೀರ್ಣ ಆಗುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಏಕಾಏಕಿ ಹೆಚ್ಚಾಗುವುದಿಲ್ಲ. ಅಧಿಕ ಫೈಬರ್ ಅಂದರೆ ನಾರಿನಂಶ ಇರುವುದರಿಂದ ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಜೊತೆಗೆ ಇದು ಗ್ಲುಟನ್ ಫ್ರೀ ಅಂದರೆ ಅಂಟು ರಹಿತವೂ ಹೌದು. ಇಷ್ಟೆಲ್ಲಾ ಅದ್ಭುತ ಗುಣಗಳನ್ನು ಹೊಂದಿರುವ ಕಪ್ಪಕ್ಕಿ ನಿಮ್ಮ ಅಡುಗೆ ಮನೆಗೆ ಪ್ರವೇಶಿಸುವುದು ತಡವಾಗದೆ ಇರಲಿ.