
ಹರಿಯಾಣದ ಜಿಂದ್ ನಿವಾಸಿ (ಗುರುತನ್ನು ರಹಸ್ಯವಾಗಿಡಲಾಗಿದೆ) ಅವರು ವಾಟ್ಸಾಪ್ ನಗ್ನ ವೀಡಿಯೊ ಕರೆ ಹಗರಣಕ್ಕೆ ಬಲಿಯಾದ ನಂತರ ಸೈಬರ್ ದರೋಡೆಕೋರರಿಗೆ 1.57 ಲಕ್ಷ ರೂಪಾಯಿಗಳನ್ನು ಕಳೆದುಕೊಂಡರು.
ಜಿಂದ್ ನಿವಾಸಿಯು ಸೈಬರ್ ದರೋಡೆಕೋರರಿಂದ ವಾಟ್ಸಾಪ್ ವೀಡಿಯೊ ಕರೆಯನ್ನು ಸ್ವೀಕರಿಸಿದ್ದಾರೆ. ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದ ಯುವತಿ ಅದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ಆತನನ್ನ ಬ್ಲ್ಯಾಕ್ ಮೇಲ್ ಮಾಡಿ 1.57 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಹರಿಯಾಣದ ರಾಜ್ಯ ಅಪರಾಧ ವಿಭಾಗ ತಿಳಿಸಿದೆ.
ಸಂತ್ರಸ್ತ ವ್ಯಕ್ತಿ ವಂಚಕರಿಗೆ ಹಣ ಪಾವತಿಸಿದ್ದರೂ, ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದರು. ಹೀಗಾಗಿ 1,39,140 ರೂ. ಉಳಿದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಅವರು 90,140 ಮತ್ತು 49,000 ರೂಪಾಯಿ ಮೌಲ್ಯದ ಎರಡು ಹಣದ ವಹಿವಾಟುಗಳನ್ನು ನಿರ್ಬಂಧಿಸಿ, ಆ ಹಣವನ್ನು ಸಂತ್ರಸ್ತ ವ್ಯಕ್ತಿಗೆ ಹಿಂತಿರುಗಿಸಿದ್ದಾರೆ.
ಅಪರಿಚಿತರಿಂದ ಬರುವ ವೀಡಿಯೊ ಕರೆಗಳನ್ನು ಸ್ವೀಕರಿಸದಂತೆ ಹಾಗು ಸಂದೇಶಗಳು ಮತ್ತು ಮೇಲ್‌ಗಳ ಮೂಲಕ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಪೊಲೀಸರು ಜನರಿಗೆ ಸಲಹೆ ನೀಡುತ್ತಿದ್ದಾರೆ.