ಉತ್ತರ ಭಾರತದಲ್ಲಿ ಪ್ರಸ್ತುತ ಭಾರಿ ಮಳೆ, ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ಥವಾಗಿರುವ ನಡುವೆಯೇ ಈ ಬಾರಿಯ ಜಾಗತಿಕ ತಾಪಮಾನದ ಬಗ್ಗೆ ನಾಸಾ ಹಾಗೂ ಎನ್ ಒಎಎ ಆಶ್ಚರ್ಯಕರ ಮಾಹಿತಿಯೊಂದನ್ನು ನೀಡಿದೆ.
ಈ ವರ್ಷದ ಜೂನ್ ತಿಂಗಳಲ್ಲಿ ಕಳೆದ 174 ವರ್ಷಗಳಲ್ಲಿಯೇ ಅತಿ ಹೆಚ್ಚು ಬಿಸಿಲ ಝಳವಿತ್ತು ಎಂದು ಅಮೆರಿಕಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹಾಗೂ ರಾಷ್ಟ್ರೀಯ ಸಮುದ್ರ ಮತ್ತು ಹವಾಮಾನ ಆಡಳಿತದ (ಎನ್ ಒಎಎ) ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
2023ನೇ ವರ್ಷವು ಅತಿ ಹೆಚ್ಚು ಬಿಸಿಲ ಝಳವಿದ್ದ ದಾಖಲೆಯ ಹತ್ತು ವರ್ಷಗಳ ಪಟ್ಟಿಗೆ ಸೇರಲಿದೆ. ಇನ್ನು ಅತಿ ಹೆಚ್ಚು ಬಿಸಿಲ ಝಳ ದಾಖಲಾದ 5 ವರ್ಷಗಳ ಪಟ್ಟಿಗೆ ಸೇರುವ ಸಾಧ್ಯತೆಯೂ ಶೇ.97ರಷ್ಟಿದೆ. ಈ ರೀತಿ ತಾಪಮಾನ ಹೆಚ್ಚಳಕ್ಕೆ ‘ಎಲ್ ನಿನೊ’ (ಫೆಸಿಪಿಕ್ ಸಾಗರದ ಮೇಲ್ಮೈಯಲ್ಲಿ ಅಸಹಜ ಬಿಸಿಯಾಗುವಿಕೆ) ವಿದ್ಯಮಾನ ಕಾರಣ ಎಂದು ರಾಷ್ಟ್ರೀಯ ಸಮುದ್ರ ಮತ್ತು ಹವಾಮಾನ ಆಡಳಿತ ತಿಳಿಸಿದೆ.
1991ರಿಂದ 2023ರ ವರೆಗಿನ ಸರಾಸರಿಗಿಂತ ಈ ವರ್ಷ ಜೂನ್ ನಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಗಿತ ಹೆಚ್ಚು ತಾಪಮಾನ ದಾಖಲಾಗಿದೆ ಎಂದು ಐರೋಪ್ಯ ಒಕ್ಕೂಟದ ಕೊಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್ ಸಂಸ್ಥೆ ತಿಳಿಸಿದೆ. 20ನೇ ಶತಮಾನದ ಸರಾಸರಿ ತಾಪಮಾನವು 15.5 ಡಿಗ್ರಿ ಸೆಲ್ಸಿಯಸ್ ಇತ್ತು. ಈ ವರ್ಷದ ಜೂನ್ ತಿಂಗಳ ಭೂ ಮೇಲ್ಮೈ ಜಾಗತಿಕ ತಾಪಮಾನವು 20ನೇ ಶತಮಾನದ ಸರಾಸರಿಗಿಂತ 1.05 ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ ಎಂದು ಎನ್ ಒಎಎ ತಿಳಿಸಿದೆ.