ರಾಯಚೂರು: ನಿಧಿಗಳ್ಳರ ಕಣ್ಣಿಗೆ ಬಿದ್ದ ಶ್ರೀಕೃಷ್ಣನ ದೇವಾಲಯ, ಸಂಪೂರ್ಣ ಧ್ವಂಸವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದಲ್ಲಿ ನಡೆದಿದೆ. ಇಲ್ಲಿಯ ಸರ್ಕಾರಿ ಶಾಲೆಯ ಪಕ್ಕದಲ್ಲಿ ಶ್ರೀಕೃಷ್ಣನ ದೇವಾಲಯವಿದೆ. ಈ ದೇವಾಲಯಕ್ಕೆ ಗ್ರಾಮಸ್ಥರೆಲ್ಲ ಬಂದು ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಇದು ನಿಧಿಗಳ್ಳರ ಕಣ್ಣಿಗೆ ಬಿದ್ದಿದೆ.
ಶ್ರೀಕೃಷ್ಣನ ವಿಗ್ರಹದ ಕೆಳಗೆ ನಿಧಿ ಇದೆ ಎಂದು ತಿಳಿದ ಪಾಪಿಗಳು, ರಾತ್ರೋರಾತ್ರಿ ಒಳಗೆ ನುಗ್ಗಿ ದೇವರ ಮೂರ್ತಿ ತೆಗೆದು ಆಳೆತ್ತರದ ಗುಂಡಿ ತೋಡಿ ನಿಧಿಗಾಗಿ ತಡಕಾಡಿದ್ದಾರೆ. ಹೀಗಾಗಿ ನಿಧಿಗಳ್ಳರ ಆಸೆಗೆ ದೇವಸ್ಥಾನದ ಪೂಜಾ ಸ್ಥಳ ಸಂಪೂರ್ಣವಾಗಿ ಹಾಳಾಗಿದೆ.
ಎಂದಿನಂತೆ ಬೆಳಿಗ್ಗೆ ದೇವರ ದರ್ಶನಕ್ಕೆ ಬಂದಿದ್ದ ಗ್ರಾಮಸ್ಥರು ಇದನ್ನು ಕಂಡು ಗಾಬರಿಯಾಗಿದ್ದಾರೆ. ನೆಲದ ಮೇಲೆ ದೇವರ ವಿಗ್ರಹ ಹಾಗೂ ಪಾದಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.