ಆರೋಗ್ಯವಾಗಿರಲು ಚೆನ್ನಾಗಿ ನಿದ್ದೆ ಮಾಡುವಂತೆ ವೈದ್ಯರು ಸಲಹೆ ಕೊಡ್ತಾರೆ. ನಿದ್ದೆ ಸರಿಯಾಗಿ ಮಾಡಿದ್ರೆ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಮುಕ್ತಿ ಹೊಂದಬಹುದು. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು ನಿದ್ರೆ ಸಹಕಾರಿಯಾಗುತ್ತದೆ. ಆದರೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ನಿದ್ರಾಹೀನತೆ ಕಾಡುತ್ತದೆ. ಇದಕ್ಕೆ ಕಾರಣ ರಾತ್ರಿ ಊಟದ ನಂತರ ಮಾಡುವ ಸಣ್ಣಪುಟ್ಟ ತಪ್ಪುಗಳು. ನಿದ್ದೆಗೆ ಅಡ್ಡಿಪಡಿಸುವ ಆ ತಪ್ಪುಗಳು ಯಾವುದು ಅನ್ನೋದನ್ನು ನೋಡೋಣ.
ಊಟವಾದ ಬಳಿಕ ಕುಳಿತುಕೊಳ್ಳುವುದು: ಕೆಲವರು ಊಟ ಮಾಡಿದ ನಂತರ ಆರಾಮಾಗಿ ಕೂತುಬಿಡುತ್ತಾರೆ. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದೇ ಕಾರಣಕ್ಕೆ ನಿದ್ದೆಗೂ ತೊಂದರೆಯಾಗುತ್ತದೆ. ಹಾಗಾಗಿ ಆಹಾರ ಸೇವಿಸಿದ ಅರ್ಧ ಗಂಟೆಯ ನಂತರ ಸ್ವಲ್ಪ ಹೊತ್ತು ವಾಕ್ ಮಾಡಿ.
ಊಟವಾದ ಬಳಿಕ ಅತಿಯಾಗಿ ನೀರು ಕುಡಿಯುವುದು: ಇದು ತುಂಬಾ ಜನರು ಮಾಡುವ ಸಾಮಾನ್ಯವಾದ ತಪ್ಪು. ಹೆಚ್ಚಿನ ಜನರು ಊಟವಾದ ಮೇಲೆ ಲೀಟರ್‌ಗಟ್ಟಲೆ ನೀರು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಆಹಾರವನ್ನು ಜೀರ್ಣಿಸುವ ಕಿಣ್ವಗಳು ದುರ್ಬಲಗೊಳ್ಳುತ್ತವೆ ಮತ್ತು ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಹೊಟ್ಟೆ ಉಬ್ಬರಿಸಲು ಪ್ರಾರಂಭವಾಗುತ್ತದೆ. ಹೊಟ್ಟೆ ನೋವು ಕೂಡ ಬರಬಹುದು.
ಅವಸರದಲ್ಲಿ ಊಟ ಮಾಡುವುದು: ಕೆಲವರು ಅವಸರದಲ್ಲಿ ಊಟ ಮಾಡುತ್ತಾರೆ. ಆದರೆ ಈ ರೀತಿ ಗಡಿಬಿಡಿಯಲ್ಲಿ ಊಟ ಮಾಡಿದರೆ ಅದು ಅಜೀರ್ಣದ ಸಮಸ್ಯೆಯನ್ನು ಉಂಟುಮಾಡುತ್ತದೆ. ಹೊಟ್ಟೆ ಉಬ್ಬರಿಸುವುದು, ಗ್ಯಾಸ್ಟ್ರಿಕ್ ಕೂಡ ಉಂಟಾಗುತ್ತದೆ. ಇದೇ ಕಾರಣಕ್ಕೆ ತೂಕವೂ ಹೆಚ್ಚಾಗತೊಡಗುತ್ತದೆ. ಹಾಗಾಗಿ ನಿಧಾನವಾಗಿ ಚೆನ್ನಾಗಿ ಅಗಿದು ಊಟ ಮಾಡಬೇಕು.