ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷ ನೀಡಿ ಕೊಲೆ ಮಾಡಿದ್ದು, ಮೊದಲಿಗೆ ಅಮಾಯಕಿಯಂತೆ ನಾಟಕವಾಡಿದ್ದ ಆಕೆ ಪೊಲೀಸರ ಸುದೀರ್ಘ ವಿಚಾರಣೆ ಬಳಿಕ ಅಸಲಿ ಸತ್ಯ ಬಿಚ್ಚಿಟ್ಟಿದ್ದಾಳೆ. ಇಂತಹದೊಂದು ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಪ್ರಕರಣದ ವಿವರ: ತಿರುವನಂತಪುರಂನಲ್ಲಿ ರೇಡಿಯೋಲಜಿ ವ್ಯಾಸಂಗ ಮಾಡುತ್ತಿದ್ದ ಶರೋನ್ ರಾಜ್ ಎಂಬಾತನನ್ನು ಗ್ರೀಷ್ಮಾ ಎಂಬಾಕೆ ಪ್ರೀತಿಸುತ್ತಿದ್ದಳು. ಆದರೆ ಗ್ರೀಷ್ಮಾಗೆ ಮನೆಯವರು ಬೇರೊಂದು ಕಡೆ ವಿವಾಹ ನಿಶ್ಚಯ ಮಾಡಿದ್ದರು.
ಹೀಗಾಗಿ ಶರೋನ್ ರಾಜ್ ಜೊತೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದ ಗ್ರೀಷ್ಮಾ ಈ ವಿಚಾರವನ್ನು ತಿಳಿಸಿದ್ದಾಳೆ. ಆದರೆ ಆತ ಇದಕ್ಕೆ ನಿರಾಕರಿಸಿದ್ದ ಎನ್ನಲಾಗಿದೆ. ಅಲ್ಲದೆ ಜ್ಯೋತಿಷಿಯೊಬ್ಬ ನಿನ್ನ ಮೊದಲ ಪತಿ ಬಹುಬೇಗನೆ ಸಾಯುತ್ತಾನೆ ಎಂದು ತಿಳಿಸಿದ್ದರಂತೆ.
ಹೀಗಾಗಿ ಶರೋನ್ ರಾಜ್ ನನ್ನು ತನ್ನ ಹಾದಿಯಿಂದ ದೂರ ಸರಿಸಿಕೊಳ್ಳಲು ಮುಂದಾದ ಗ್ರೀಷ್ಮಾ ಕೊಲೆ ಮಾಡುವ ಪ್ಲಾನ್ ಮಾಡಿದ್ದಾಳೆ. ಇದಕ್ಕಾಗಿ ಆತನನ್ನು ಅಕ್ಟೋಬರ್ 16 ರಂದು ತನ್ನ ಮನೆಗೆ ಕರೆಯಿಸಿಕೊಂಡು ಕಷಾಯದ ಜೊತೆ ಕೀಟನಾಶಕ ಬೆರೆಸಿ ಕುಡಿಸಿದ್ದಾಳೆ.
ಇದರಿಂದ ವಾಂತಿ ಮಾಡಿಕೊಂಡ ಆತ ಬಳಿಕ ಮನೆಗೆ ತೆರಳಿದ್ದು, ಆದರೆ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಅಕ್ಟೋಬರ್ 25ರಂದು ಈತ ಮೃತಪಟ್ಟಿದ್ದ. ಆದರೆ ಅಕ್ಟೋಬರ್ 20ರಂದು ಪೊಲೀಸರ ಮುಂದೆ ನೀಡಿದ ಹೇಳಿಕೆ ವೇಳೆ ಶರೋನ್ ರಾಜ್ ತನಗೆ ಯಾರ ಮೇಲೂ ಅನುಮಾನ ಇಲ್ಲ ಎಂದಿದ್ದ ಎನ್ನಲಾಗಿದೆ.
ಆದರೆ ಗ್ರೀಷ್ಮಾಳೇ ಶರೋನ್ ರಾಜ್ ಸಾವಿಗೆ ಕಾರಣವೆಂದು ಬಲವಾಗಿ ನಂಬಿದ್ದ ಆತನ ಸಹೋದರ ಪೊಲೀಸರ ಮೇಲೆ ಒತ್ತಡ ತಂದಿದ್ದು, ಕೊನೆಗೆ ಅಕ್ಟೋಬರ್ 31ರಂದು ಆಕೆಯನ್ನು ಠಾಣೆಗೆ ಕರೆಸಿಕೊಂಡು ಎಂಟು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ತಾನು ಕೊಲೆ ಮಾಡಿರುವ ಸಂಗತಿಯನ್ನು ಒಪ್ಪಿಕೊಂಡಿದ್ದಾಳೆ.