ನಿಲುಗಡೆ ಮಾಡಲಾಗಿದ್ದ ವಾಹನದಲ್ಲಿ ಸಾವು ಸಂಭವಿಸಿದರೂ ಕೂಡ ಪರಿಹಾರ ನೀಡಬೇಕು ಎಂದು ವಿಮಾ ಕಂಪನಿಗೆ ಸೂಚಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣ ಒಂದರ ವಿಚಾರಣೆ ವೇಳೆ ಈ ತೀರ್ಪು ಹೊರ ಬಿದ್ದಿದ್ದು, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ವಿವರ: ಲಾರಿ ಚಾಲಕರಾಗಿದ್ದ ಈರಣ್ಣ ಎಂಬವರು ಸುರತ್ಕಲ್ ಸಮೀಪದ ಇದ್ಯಾ ಗ್ರಾಮದ ಪೆಟ್ರೋಲ್ ಬಂಕ್ ಒಂದರ ಬಳಿ ತಮ್ಮ ವಾಹನವನ್ನು ನಿಲ್ಲಿಸಿಕೊಂಡಿದ್ದ ವೇಳೆ ಹೃದಯಘಾತವಾಗಿ ವಾಹನದಲ್ಲೇ ಮೃತಪಟ್ಟಿದ್ದರು. ಲಾರಿ ಚಾಲಕ ಈರಣ್ಣನ ಅಪ್ರಾಪ್ತ ಮಕ್ಕಳು ಪರಿಹಾರ ಕೋರಿ ಕಾರ್ಮಿಕ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ್ದ ಆಯುಕ್ತರು ಶೇಕಡ 12ರ ಬಡ್ಡಿ ಸಹಿತ 3,03,620 ರೂಪಾಯಿಗಳನ್ನು ಪಾವತಿಸುವಂತೆ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಸೂಚಿಸಿದ್ದು ಆದರೆ, ಇದಕ್ಕೆ ನಿರಾಕರಿಸಿದ ವಿಮಾ ಕಂಪನಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಇದೀಗ ಹೈಕೋರ್ಟ್ ಆದೇಶ ಹೊರ ಬಿದ್ದಿದ್ದು, ಚಾಲಕ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ. ಆತ ವಾಹನ ಚಾಲನೆ ಮಾಡುತ್ತಿರಲಿಲ್ಲ ಎಂಬುದು ಸಕಾರಣವಲ್ಲ. ಹೀಗಾಗಿ ಪರಿಹಾರ ಪಾವತಿಸಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಈ ಆದೇಶ ಹೊರಡಿಸಿದ್ದಾರೆ.