ಪೌಷ್ಠಿಕ ಆಹಾರ ಸೇವಿಸಿದ್ರೆ ನಾವು ಆರೋಗ್ಯವಾಗಿರಬಹುದು. ಆದರೆ ನಮ್ಮ ಆಹಾರವು ರಕ್ತದ ಗುಂಪಿಗೆ ಅನುಗುಣವಾಗಿರಬೇಕು ಅನ್ನೋದು ಕೆಲವರಿಗೆ ಮಾತ್ರ ಗೊತ್ತು. ಏಕೆಂದರೆ ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ ವಿಭಿನ್ನ ಸ್ವಭಾವವನ್ನು ಹೊಂದಿರುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಡಯಟ್ ಕೂಡ ಇರಬೇಕು. A, B, AB ಮತ್ತು O ಎಂದು ರಕ್ತದ ಗುಂಪಿನಲ್ಲಿ ನಾಲ್ಕು ವಿಧಗಳಿವೆ. ವೈದ್ಯರನ್ನು ಭೇಟಿ ಮಾಡುವ ಮೂಲಕ ರಕ್ತದ ಗುಂಪನ್ನು ನೀವು ತಿಳಿದುಕೊಳ್ಳಬಹುದು. ಯಾವ ರಕ್ತದ ಗುಂಪಿನವರು ಏನು ತಿನ್ನಬೇಕು? (ಬ್ಲಡ್ ಗ್ರೂಪ್ ಡಯಟ್) ಮತ್ತು ಯಾವುದನ್ನು ಸೇವಿಸಬಾರದು ಎಂಬುದನ್ನೆಲ್ಲ ನೋಡೋಣ.
A ಬ್ಲಡ್ ಗ್ರೂಪ್: A ರಕ್ತದ ಗುಂಪನ್ನು ಹೊಂದಿರುವವರ ಪ್ರತಿರಕ್ಷಣಾ ವ್ಯವಸ್ಥೆಯು ಬಹಳ ಸೂಕ್ಷ್ಮವಾಗಿರುತ್ತದೆ. ಅದಕ್ಕಾಗಿಯೇ ಅವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇವರು ಮಾಂಸದ ಸೇವನೆಯನ್ನು ಕಡಿಮೆ ಮಾಡಬೇಕು, ಏಕೆಂದರೆ ಇದು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ರಕ್ತದ ಗುಂಪಿನವರು ಚಿಕನ್ ಮತ್ತು ಮಟನ್ ಸೇವಿಸದೇ ಇರುವುದು ಉತ್ತಮ. ಸೊಪ್ಪು, ತರಕಾರಿಗಳು, ಕ್ಯಾರೆಟ್, ಪೇರಳೆ, ಬೆಳ್ಳುಳ್ಳಿ, ಧಾನ್ಯಗಳು, ಬೀನ್ಸ್ ಮತ್ತು ಹಣ್ಣುಗಳನ್ನು ತಿನ್ನಬೇಕು. ಹಾಲು ಮತ್ತು ಅದರ ಉತ್ಪನ್ನಗಳು, ಅಕ್ಕಿ ಮತ್ತು ಮೊಟ್ಟೆಗಳನ್ನು ಸಹ ಎಚ್ಚರಿಕೆಯಿಂದ ಸೇವಿಸಬೇಕು. ಮೊಸರು ಅಥವಾ ಸೋಯಾ ಹಾಲು ಸೇವನೆ ಪ್ರಯೋಜನಕಾರಿ.
B ಬ್ಲಡ್ ಗ್ರೂಪ್ B ರಕ್ತದ ಗುಂಪಿನ ರಕ್ತದ ಜನರು ಆಹಾರದ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಈ ರಕ್ತದ ಗುಂಪಿನವರು ಏನು ಬೇಕಾದರೂ ತಿನ್ನಬಹುದು. ಸೊಪ್ಪು, ತರಕಾರಿಗಳು, ಹಣ್ಣುಗಳು, ಚಿಕನ್-ಮಟನ್ ಇವನ್ನೆಲ್ಲ ಸೇವನೆ ಮಾಡಬಹುದು. ಅವರ ಜೀರ್ಣಾಂಗ ವ್ಯವಸ್ಥೆ ತುಂಬಾ ಪ್ರಬಲವಾಗಿರುತ್ತದೆ, ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ. ನೀವು ಹಾಲು ಮತ್ತು ಅದರಿಂದ ತಯಾರಿಸಿದ ವಸ್ತುಗಳು, ಮೊಟ್ಟೆಗಳನ್ನು ತಿನ್ನಬಹುದು. ಆದರೆ ಆಹಾರವು ಸಮತೋಲಿತವಾಗಿರಬೇಕು ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.
AB ಬ್ಲಡ್ ಗ್ರೂಪ್ ನಮ್ಮಲ್ಲಿ ಹಲವರು ಎಬಿ ರಕ್ತದ ಗುಂಪನ್ನು ಹೊಂದಿದ್ದಾರೆ. ಈ ರಕ್ತದ ಗುಂಪಿನ ಜನರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಮೊಟ್ಟೆಗಳು ಅವರಿಗೆ ಪ್ರಯೋಜನಕಾರಿ. ಆದಾಗ್ಯೂ, ಅವರು ಮಾಂಸಾಹಾರಗಳಿಂದ ದೂರವಿರಬೇಕು. ಹಾಲಿನಿಂದ ಮಾಡಿದ ವಸ್ತುಗಳನ್ನು ತಿನ್ನಬಹುದು.
O ಬ್ಲಡ್ ಗ್ರೂಪ್ ಈ ರಕ್ತದ ಗುಂಪಿನ ಜನರು ಪ್ರೋಟೀನ್ ತಿನ್ನಬೇಕು. ಹೆಚ್ಚಿನ ಪ್ರೋಟೀನ್ ಆಹಾರಗಳಾದ ಬೇಳೆಕಾಳುಗಳು, ಮಾಂಸ, ಮೀನು, ಹಣ್ಣುಗಳು ಅವರಿಗೆ ಪ್ರಯೋಜನಕಾರಿ. ಧಾನ್ಯಗಳು ಮತ್ತು ಬೀನ್ಸ್ ಅನ್ನು ಸಮತೋಲಿತ ಪ್ರಮಾಣದಲ್ಲಿ ಸೇವನೆ ಮಾಡಬಹುದು.