ರಾಜ್ಯ ವಿಧಾನಸಭಾ ಚುನಾವಣೆಗೆ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ತೆರಳುವವರಿಗೆ ಕೆಲವೊಂದು ಮುಖ್ಯ ಮಾಹಿತಿ ಇಲ್ಲಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು ,ನೀವು ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದ ಪಕ್ಷದಲ್ಲಿ ಚುನಾವಣಾ ಆಯೋಗವು ಅನುಮತಿಸಿರುವ ಈ ಕೆಳಕಂಡ ಗುರುತಿನ ದಾಖಲೆಗಳನ್ನು ತೋರಿಸಿ ಮತ ಹಾಕಬಹುದಾಗಿದೆ.
ಭಾವಚಿತ್ರವಿರುವ 12 ಪರ್ಯಾಯ ಗುರುತಿನ ಚೀಟಿಗಳ ಪಟ್ಟಿ ಇಂತಿದ್ದು, ಆಧಾರ್ ಕಾರ್ಡ್, ಎಂ ಓ ಎಲ್ ಮತ್ತು ಇ ಅನ್ವಯ ನೀಡಲಾಗಿರುವ ಸ್ಮಾರ್ಟ್ ಕಾರ್ಡ್, ಬ್ಯಾಂಕ್ – ಅಂಚೆ ಕಚೇರಿಯಿಂದ ಭಾವಚಿತ್ರದೊಂದಿಗೆ ನೀಡಲಾಗಿರುವ ಪಾಸ್ ಬುಕ್, ಭಾರತೀಯ ಪಾಸ್ಪೋರ್ಟ್, ಕಾರ್ಮಿಕ ಸಚಿವಾಲಯದ ಯೋಜನೆ ಅಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆ ಪತ್ರ, ಪಾನ್ ಕಾರ್ಡ್, ಎಂಎಲ್ಎ – ಎಂಪಿ ಯ ಅಧಿಕೃತ ಗುರುತಿನ ಚೀಟಿ, ಸರ್ಕಾರಿ – ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ ಅಥವಾ ವಿಶೇಷ ಚೇತನ ವ್ಯಕ್ತಿಗಳಾಗಿದ್ದಲ್ಲಿ ಸಾಮಾಜಿಕ ನ್ಯಾಯ ಇಲಾಖೆ ನೀಡಿರುವ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ.
ಇನ್ನು ಮತದಾನಕ್ಕೆ ಹೋಗುವಾಗ ಗುರುತಿನ ಚೀಟಿ ತಪ್ಪದೆ ನಿಮ್ಮ ಜೊತೆಗಿರಲಿ.
ವಿದ್ಯುನ್ಮಾನ ಮತ ಯಂತ್ರದಲ್ಲಿ ಮತ ಹಾಕಲು ನಿಮ್ಮ ಆಯ್ಕೆಯ ಪಕ್ಷ / ಅಭ್ಯರ್ಥಿಯ ಚಿನ್ಹೆ ಪಕ್ಕದ ನೀಲಿ ಬಟನ್ ಒತ್ತಬೇಕು.
ಮತಯಂತ್ರಕ್ಕೆ ಜೋಡಿಸಿರುವ ವಿವಿಪ್ಯಾಟ್ ಮೂಲಕ ನೀವು ಯಾವ ಪಕ್ಷ / ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ಮುದ್ರಿತ ಕಾಗದದಲ್ಲಿ ನೀವು ನೋಡಬಹುದಾಗಿದೆ.
ವಿಕಲಚೇತನ ಮತದಾರರು ಮತ ಚಲಾಯಿಸಲು ಎಲ್ಲ ಅಗತ್ಯ ನೆರವು ನೀಡಲಾಗುತ್ತದೆ.
ದೃಷ್ಟಿ ಹೀನರು ಮತ್ತು ವಿಕಲಚೇತನ ಮತದಾರರು ತಮ್ಮ ಜೊತೆಗಾರರ ನೆರವಿನಿಂದ ಮತ ಚಲಾಯಿಸಬಹುದಾಗಿದೆ.