ಕಳೆದ ವರ್ಷದ ಜುಲೈನಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಮನೆಯ ಗೃಹಪ್ರವೇಶ ಏಪ್ರಿಲ್ 27ರ ನಾಳೆ ನಡೆಯಲಿದೆ.
60 ಲಕ್ಷ ರೂಪಾಯಿ ವೆಚ್ಚದಲ್ಲಿ, 2700 ಚದರ ಅಡಿ ವಿಸ್ತೀರ್ಣದಲ್ಲಿ ಈ ಮನೆ ನಿರ್ಮಾಣವಾಗಿದ್ದು, ಈ ಮನೆ ನಿರ್ಮಾಣದ ವೆಚ್ಚವನ್ನು ಬಿಜೆಪಿ ಭರಿಸಿದೆ. ಈ ಮೂಲಕ ಸ್ವಂತ ಮನೆ ಕಟ್ಟಿಸಬೇಕೆಂಬ ಪ್ರವೀಣ್ ನೆಟ್ಟಾರು ಅವರ ಕನಸನ್ನು ನನಸು ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರ ರಾತ್ರಿ ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವುದಾಗಿ ಬಿಜೆಪಿ ಹೇಳಿತ್ತು. ಅದರಂತೆ ಈಗ ಮನೆ ನಿರ್ಮಿಸಲಾಗಿದ್ದು, ನಾಳೆ ಬೆಳಿಗ್ಗೆ ಶ್ರೀ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹಪ್ರವೇಶ ನೆರವೇರಲಿದೆ.