ಹಿಜಾಬ್ ಸಂಘರ್ಷದ ನಡುವೆಯೇ ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಪರೀಕ್ಷೆ ಫೆ.17 ನೇ ತಾರೀಖಿನಿಂದ ಶುರುವಾಗಬೇಕಿತ್ತು. ಆದರೆ ಹಿಜಾಬ್ ವಿವಾದದಿಂದ ಕಾಲೇಜುಗಳಿಗೆ ರಜೆ ನೀಡಿದ ಕಾರಣ ಮೂರು ದಿನಗಳ ನಂತರ ಪರೀಕ್ಷೆ ನಡೆಸಲು ಪಿಯು ಮಂಡಳಿ ನಿರ್ಧರಿಸಿದ್ದು, ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಇದರಿಂದ ಹಿಜಾಬ್ ಸಂಘರ್ಷದ ಕಾರಣದಿಂದ ಕಾಲೇಜಿಗೆ ಹಾಜರಾಗದೆ, ತರಗತಿಯಿಂದ ದೂರ ಉಳಿದಿರುವ ವಿದ್ಯಾರ್ಥಿನಿಯರು ಆಘಾತಕ್ಕೆ ಒಳಗಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ನಾಳೆಯಿಂದ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭವಾಗುತ್ತಿದೆ. ಸಾಕಷ್ಟು ವಿದ್ಯಾರ್ಥಿನಿಯರು ಹಿಜಾಬ್ ವಿಚಾರವಾಗಿ ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಕಾಲೇಜಿನೊಳಗೆ ಕಾಲಿಡುವುದಿಲ್ಲ, ಪರೀಕ್ಷೆಯು ಬರೆಯುವುದಿಲ್ಲ ಎಂದು ಹಠ ಹಿಡಿದು ಕುಳಿತಿರುವುದು ತಿಳಿದಿರುವ ಸಂಗತಿ.
ಇನ್ನು ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಸಾಮಾನ್ಯ ಪರೀಕ್ಷೆಯಂತೆ ನಡೆಯುವುದಿಲ್ಲ. ಒಂದು ವೇಳೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗದೆ ಇದ್ದರೆ ಮತ್ತೊಂದು ಅವಕಾಶ ದೊರೆಯುವುದಿಲ್ಲ. ಜೊತೆಗೆ ಎಲ್ಲಾ ಪ್ರಾಯೋಗಿಕ ಪರೀಕ್ಷೆ ಮುಗಿಸಲು ಪದವಿ ಪೂರ್ವ ಮಂಡಳಿ, ಕಾಲೇಜುಗಳಿಗೆ ಮಾರ್ಚ್ 25ರವರೆಗೂ ಅವಕಾಶ ನೀಡಿದ್ದು, ಅಷ್ಟರಲ್ಲಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ.