ಕೊರೊನಾ ಕಾರಣಕ್ಕೆ ಕಳೆದೆರೆಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಲ್ಲದೆ ಆನ್ ಲೈನ್ ಮೂಲಕವೇ ಶಿಕ್ಷಣ ನಡೆಯುತ್ತಿತ್ತು. ಇದೀಗ ನಾಳೆಯಿಂದ ಪಿಯು ಕಾಲೇಜುಗಳು ಆರಂಭವಾಗುತ್ತಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡ ನಂತರ ಎಚ್ಚೆತ್ತಿರುವ ಸರ್ಕಾರ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಿದ್ದು, ಒಂದು ವೇಳೆ ಸಮವಸ್ತ್ರ ನಿಯಮ ಇಲ್ಲದ ಕಾಲೇಜುಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತಹ ವಸ್ತ್ರ ಧರಿಸಬೇಕೆಂದು ಸೂಚಿಸಿಸಲಾಗಿದೆ.
ಇನ್ನು ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯ ನಡೆಯುತ್ತಿರುವುದರಿಂದ ಆರಂಭದಲ್ಲಿ ಉಪನ್ಯಾಸಕರ ಹಾಜರಾತಿ ಕಡಿಮೆ ಇರಲಿದೆ ಎನ್ನಲಾಗಿದ್ದು, ಜೂನ್ 13 ರಿಂದ ಉಪನ್ಯಾಸಕರು ಪೂರ್ಣಪ್ರಮಾಣದಲ್ಲಿ ಕಾಲೇಜಿಗೆ ಹಾಜರಾಗುವ ಸಾಧ್ಯತೆ ಇದೆ.