ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಗಳು ನಾಳೆಯಿಂದ ಆರಂಭವಾಗುತ್ತಿದೆ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಈಗಾಗಲೇ ಸಕಲ ಸಿದ್ದತೆ ನಡೆಸಿದೆ.
ರಾಜ್ಯದಾದ್ಯಂತ ಒಟ್ಟು 1,109 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ 7,26,213 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ 6.29 ಲಕ್ಷ ವಿದ್ಯಾರ್ಥಿಗಳು ಹೊಸದಾಗಿ ನೋಂದಾಯಿಸಿಕೊಂಡವರಾಗಿದ್ದರೆ,25,847 ವಿದ್ಯಾರ್ಥಿಗಳು ಖಾಸಗಿ ಮತ್ತು 70,586 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಮುಖ್ಯ ಮಾಹಿತಿಗಳು ಇಲ್ಲಿವೆ.
ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಕ್ಕೆ ಹೋಗಲು ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
ಅಲ್ಲದೆ ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಬಸ್ ನಿಲುಗಡೆಗೆ ಸೂಚಿಸಲಾಗಿದೆ.
ಇನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಮೊದಲೇ ತಿಳಿದುಕೊಳ್ಳುವುದು ಅಗತ್ಯ.
ಪರೀಕ್ಷೆಗೆ ತೆರಳುವಾಗ ಪ್ರವೇಶ ಪತ್ರವನ್ನು ಮರೆಯದೆ ತೆಗೆದುಕೊಂಡು ಹೋಗಿ.
ಪರೀಕ್ಷೆ ಬರೆಯಲು ಬೇಕಾದ ಪೆನ್ನು, ಪೆನ್ಸಿಲ್ ಮೊದಲಾದವು ಕೂಡ ಇಟ್ಟುಕೊಂಡಿದ್ದೇವೋ ಇಲ್ಲವೋ ಎಂಬುದನ್ನು ಪರಿಶೀಲಿಸಿ.
ಮಾಸ್ಕ್, ನೀರಿನ ಬಾಟಲಿ ತೆಗೆದುಕೊಂಡು ಹೋಗುವುದು ಸೂಕ್ತ.
ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷೆಯನ್ನು ಯಾವುದೇ ಆತಂಕ ಇಲ್ಲದಂತೆ ಆತ್ಮ ವಿಶ್ವಾಸದಿಂದ ಬರೆಯಿರಿ.