ಅಮೃತಸರದ ಕ್ಯಾಂಪ್ನಲ್ಲಿ ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದ ಬಿಎಸ್ಎಫ್ ಯೋಧನೊಬ್ಬ ಇತ್ತೀಚೆಗೆ ಸಾಲ ಪಡೆದಿದ್ದ. ಬಹುಶಃ ಇದರಿಂದ ಆತ ಈ ರೀತಿ ಮಾಡಿರಬಹುದು ಎಂದು ಘಟನೆಯ ಕುರಿತು ಆಂತರಿಕ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗಳ ಅನುಕ್ರಮವನ್ನು ತನಿಖೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಗಳ ತಂಡವು ಕರ್ನಾಟಕ ಮೂಲದ ಯೋಧ ಸತ್ತೆಪ್ಪ ಎಸ್ಕೆ (35) ಅವರ ಕುಟುಂಬವನ್ನು ಭೇಟಿ ಮಾಡಲು ರಾಜ್ಯಕ್ಕೆ ಆಗಮಿಸಿದೆ. ಯೋಧ ಸತ್ತೆಪ್ಪ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಅಮೃತಸರದ ಖಾಸಾ ಪ್ರದೇಶದಲ್ಲಿ ಭಾನುವಾರ ನಡೆದ ಶೂಟೌಟ್ನ ಕುರಿತು ವಿಚಾರಣೆಯ ನ್ಯಾಯಾಲಯಕ್ಕೆ ಅಧಿಕಾರಿಗಳು, ಸತ್ತೆಪ್ಪ ಸಾಲವನ್ನು ತೆಗೆದುಕೊಂಡಿದ್ದಾರೆ ಮತ್ತು ಇಎಂಐಗಳನ್ನು (ಸಮಾನ ಮಾಸಿಕ ಕಂತುಗಳು) ಪಾವತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಬಹುಶಃ ಈ ವಿಷಯದ ಬಗ್ಗೆ ಕಳವಳಗೊಂಡಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ಸತ್ತೆಪ್ಪ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ನೀಡಿರುವ ಹೇಳಿಕೆಗಳನ್ನು ಕೂಡ ತಂಡ ಪರಿಶೀಲಿಸುತ್ತಿದೆ. ಜವಾನ ಅಥವಾ ಅವರ ಕುಟುಂಬ ಸದಸ್ಯರು ತನಗೆ ರಜೆ ನೀಡುವಂತೆ ಅಥವಾ ಇನ್ನಾವುದಾದರೂ ಸಹಾಯಕ್ಕಾಗಿ ತನ್ನ ಮೇಲಧಿಕಾರಿಗಳಿಗೆ ಯಾವುದೇ ವಿನಂತಿಯನ್ನು ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಶನಿವಾರ ರಾತ್ರಿ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ ಸತ್ತೆಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಶಸ್ತ್ರಾಗಾರದಿಂದ ತನ್ನ ಸೇವಾ ಆಯುಧವನ್ನು ಪಡೆದ ಅವರು, 144 ನೇ ಬೆಟಾಲಿಯನ್ ಶಿಬಿರದೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಇದರಿಂದ ನಾಲ್ವರು ಸೈನಿಕರು ಹತರಾಗಿದ್ದಾರೆ.
ಶಿಬಿರದಲ್ಲಿ ನಿಲ್ಲಿಸಿದ್ದ ಹಿರಿಯ ಅಧಿಕಾರಿಯ ಸರ್ಕಾರಿ ಎಸ್ಯುವಿ ಮೇಲೆ ಅವರು ಕೆಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗುಂಡು ತಗುಲಿದ ಆರನೇ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.