ಇತ್ತೀಚಿನ ದಿನಗಳಲ್ಲಿ ವೀಗನ್ ಅನ್ನೋದು ಫ್ಯಾಷನ್ ಆಗಿಬಿಟ್ಟಿದೆ. ವಿದೇಶಗಳಲ್ಲಿ ವೀಗನ್ ಫುಡ್‌ಗಳ ಖಯಾಲಿ ಹೆಚ್ಚು. ಆದ್ರೀಗ ‘ವೀಗಾನ್ ರಾ ಫುಡ್ ಡಯಟ್’ ಆರೋಗ್ಯಕ್ಕೆ ಮಾರಕವೇ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ರಷ್ಯಾದಲ್ಲಿ ಇದೇ ರೀತಿಯ ಆಹಾರ ಸೇವಿಸುತ್ತಿದ್ದ ಯುವತಿಯೊಬ್ಬಳ ಸಾವು.
ರಷ್ಯಾದ ನಿವಾಸಿ ಝಾನ್ನಾ ಸ್ಯಾಮ್ಸೋನೋವಾ ಎಂಬಾಕೆ ಸಸ್ಯಾಹಾರಿ ಕಚ್ಚಾ ಆಹಾರವನ್ನು ಮಾತ್ರ ಸೇವಿಸುತ್ತಿದ್ದಳು. ಯಾವುದನ್ನೂ ಬೇಯಿಸಿ ತಿನ್ನುತ್ತಿರಲಿಲ್ಲ. ಹಣ್ಣು – ತರಕಾರಿಗಳನ್ನೆಲ್ಲ ಹಸಿಯಾಗಿಯೇ ತಿನ್ನುತ್ತಿದ್ದಳು.
ತನ್ನ ರಾ ಫುಡ್ ಡಯಟ್ ಅನ್ನು ಜಾಲತಾಣಗಳಲ್ಲಿಯೂ ಆಕೆ ಬಹಳಷ್ಟು ಬಾರಿ ಶೇರ್ ಮಾಡಿದ್ದಾಳೆ. ಆದ್ರೀಗ ಆಕೆ ತೀವ್ರ ಹಸಿವಿನಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ. ಸ್ಯಾಮ್ಸೋನೋವಾ ಆಗ್ನೇಯ ಏಷ್ಯಾದ ಪ್ರವಾಸದಲ್ಲಿದ್ದಾಗ ಆಕೆಯ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಡಲು ಪ್ರಾರಂಭಿಸಿತು. ವೈದ್ಯರು ಅವಳನ್ನು ಉಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಜುಲೈ 21 ರಂದು ಆಕೆ ಮೃತಪಟ್ಟಿದ್ದಾಳೆ.
ಜನ್ನಾ ಕೆಲವು ತಿಂಗಳ ಹಿಂದೆ ಶ್ರೀಲಂಕಾ ಪ್ರವಾಸಕ್ಕೆ ಹೋದಾಗ ತುಂಬಾ ದಣಿದಿದ್ದಳಂತೆ. ಆಕೆಯ ಕಾಲುಗಳು ಊದಿಕೊಂಡಿದ್ದವು. ಅದರಿಂದ ದುಗ್ಧರಸವು ಹೊರಬರಲು ಪ್ರಾರಂಭಿಸಿತು. ನಂತರ ಚಿಕಿತ್ಸೆಗಾಗಿ ಮನೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಪಡೆಯದೇ ಆಕೆ ಫುಕೆಟ್‌ಗೆ ಹಾರಿದ್ದಾಳೆ. ದಿನೇ ದಿನೇ ಆಕೆಯ ಸ್ಥಿತಿ ಬಿಗಡಾಯಿಸಿದೆ. ಸ್ನೇಹಿತರು ಒತ್ತಾಯಿಸಿದರೂ ಆಕೆ ಚಿಕಿತ್ಸೆ ಪಡೆಯಲು ಒಪ್ಪಲೇ ಇಲ್ಲ.
ವರ್ಷಗಟ್ಟಲೆ ‘ಕಚ್ಚಾ ಸಸ್ಯಾಹಾರಿ’ ಗಳನ್ನೇ ತಿನ್ನುತ್ತಿದ್ದರಿಂದ ಕಾಲರಾ ತರಹದ ಸೋಂಕಿನಿಂದ ಅವಳು ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಾಯಿ ಹೇಳಿಕೊಂಡಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಬಹಿರಂಗವಾಗಿಲ್ಲ. ಜನ್ನಾ ಕಳೆದ ನಾಲ್ಕು ವರ್ಷಗಳಿಂದ ಹಸಿ ಸಸ್ಯಾಹಾರಿ ಆಹಾರ ತೆಗೆದುಕೊಳ್ಳುತ್ತಿದ್ದಳು. ಹಣ್ಣುಗಳು, ಹಣ್ಣಿನ ಸ್ಮೂಥಿಗಳು ಅಥವಾ ಜ್ಯೂಸ್ ಮತ್ತು ಸೂರ್ಯಕಾಂತಿ ಬೀಜದ ಮೊಳಕೆಗಳನ್ನು ಮಾತ್ರ ಸೇವಿಸುತ್ತಿದ್ದಳು. ಕಳೆದ ಏಳು ವರ್ಷಗಳಿಂದ ಸಿಹಿ ಹಲಸು ತಿನ್ನುತ್ತಿದ್ದಳು.
ಕೇವಲ ಹಸಿ ವಸ್ತುಗಳು ಆಕೆಯ ದೇಹವನ್ನು ದುರ್ಬಲಗೊಳಿಸಿತು ಎನ್ನಲಾಗ್ತಿದೆ. ಕಚ್ಚಾ ಸಸ್ಯಾಹಾರಿ ಆಹಾರವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ತೂಕ ನಷ್ಟ, ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಈ ಆಹಾರದಿಂದ ಕೆಲವು ಅಡ್ಡ ಪರಿಣಾಮಗಳೂ ಇವೆ. ಈ ಆಹಾರವು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು. B12 ಮಟ್ಟಗಳು ಕಡಿಮೆಯಾಗಬಹುದು. ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಸಹ ಇದು ಕಾರಣವಾಗುತ್ತದೆ.