ಮಂಗಳೂರು: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕೇವಲ ನಾಯಕತ್ವಕ್ಕಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದು, ಇದು ರಾಜಕೀಯ ಡ್ರಾಮಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದೆ. ಜನರ ಹಿತದೃಷ್ಟಿಯಿಂದ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಇದ್ಯಾವುದಕ್ಕೂ ಗೌರವ ಕೊಡದ ಕಾಂಗ್ರೆಸ್ ಮೇಕೆದಾಟು ಯೋಜನೆ ಹೆಸರಲ್ಲಿ ಪಾದಯಾತ್ರೆ ನಾಟಕವಾಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಿಗೆ ಜನರ ಆರೋಗ್ಯದ ಬಗ್ಗೆಯೂ ಕಾಳಜಿಯಿಲ್ಲ, ನೀರಿಗಾಗಿಯೂ ಹೋರಾಟ ನಡೆಸುತ್ತಿಲ್ಲ. ಕೇವಲ ನಾಯಕತ್ವಕ್ಕಾಗಿ ಡಿ.ಕೆ.ಶಿವಕುಮಾರ್ ಪಾದಯಾತ್ರೆಗೆ ಕರೆ ನೀಡಿದ್ದಾರೆ. ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಮೇಕೆದಾಟು ಯೋಜನೆ ವಿವಾದ ಕೋರ್ಟ್ ನಲ್ಲಿದೆ ಈ ವಿಚಾರ ಗೊತ್ತಿದ್ದರೂ ಜನತೆಗೆ ತಪ್ಪು ಸಂದೇಶ ನೀಡಲು ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಕೋರ್ಟ್ ದಾವೆ ಇತ್ಯರ್ಥವಾಗುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರವೇ ಯೋಜನೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಆದರೆ ಕಾಂಗ್ರೆಸ್ ದುರುದ್ದೇಶದಿಂದ ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿದೆ ಎಂದು ಗುಡುಗಿದ್ದಾರೆ.